
ಅಕಾಶದ ಮೋಡಗಳ ಮಧ್ಯದಲ್ಲಿ
ತೇಲಾಡುತ್ತಿದ್ದೆ ನಾ
ನನಗಿಷ್ಟ ಬಂದಂತೆ
ಗೊತ್ತು ಗುರಿಯಿರಲಿಲ್ಲ ನನಗೆ
ರೂಪವೂ ಇಲ್ಲದ ನಾನು
ನನ್ನ ಅಸ್ತಿತ್ವವನ್ನು ಹುಡುಕುತಿದ್ದೆ
ಗಾಳಿ ಬೀಸಿದ ಕಡೆಗೆ ಹೋಗುತ್ತಿದ್ದೆ ನಾ
ಒಂದು ಅಂತಿಮ ಗುರಿಯನ್ನು ಹುಡುಕುತ್ತಿದ್ದೆ
ಅದೊಂದು ದಿನ ನನಗಿನ್ನೂ ನೆನಪಿದೆ
ಗಾಳಿ ಜೋರಾಗಿ ಬೀಸುತ್ತಿತ್ತು
ನಾನೂ ಅತ್ತಲಿಂದಿತ್ತ ಜೋಲಾಡುತ್ತಿದ್ದೆ
ಒಮ್ಮೆಗೇ ಯಾವುದೋ ಪರ್ವತಕ್ಕೆ ಬಡಿದಂತಾಯಿತು
ಹೌದು ನನ್ನ ಪ್ರಯಾಣ ಪ್ರಾರಂಭವಾಗಿತ್ತು
ವರ್ಷ ಧಾರೆಯಾಗುತ್ತಿತ್ತು
ನಾನೂ ಕೂಡಾ ಮಳೆಯಲ್ಲಿ ಸೇರಿಕೊಂಡೆ
ನನ್ನ ಅಂತಿಮ ಗುರಿಯ ಕಡೆಗೆ
ಭೂಮಿಯ ಸ್ಪರ್ಶಕ್ಕೆ ಹಾತೊರೆಯುತ್ತಿದ್ದೆ
ಕೊನೆಗೂ ಆ ಘಳಿಗೆ ಬಂದೇ ಬಿಟ್ಟಿತು
ನನಗೊಂದು ರೂಪವೂ ಸಿಕ್ಕಿತ್ತು
ಒಂದು ನೀರ ಹನಿಯಾಗಿದ್ದೆ
ಒಂದು ನದಿಯಲ್ಲಿ ಬಂದು ಬಿದ್ದಿದೆ
ನನ್ನ ಸುದೀರ್ಘ ಪ್ರಯಾಣಕ್ಕೆ
ನದಿಯ ನೀರಿನಲ್ಲಿ ಒಂದಾಗಿ
ಮುಂದೆ ಹೊರಟೆ, ನೀರ ಅಲೆಯ ಜೊತೆಗೆ
ಕಲ್ಲು ಬಂಡೆಗಳ ಮದ್ಯೆ ನುಗ್ಗುತ್ತಾ
ಜಲಪಾತಗಳಲ್ಲಿ ಬೀಳುತ್ತಾ
ದಟ್ಟ ಕಾನನದ ನಡುವೆ, ಬಟ್ಟ ಬಯಲಿನ ನಡುವೆ
ನನ್ನ ಪ್ರಯಾಣ ಸಾಗಿತ್ತು
ನನ್ನ ಅಸ್ತಿತ್ವದ ಅರಿವು ನನಗಾಗತೊಡಗಿತ್ತು
ಸಕಲ ಜೀವ ಜಾಲಕ್ಕೂ,
ಜೀವ ಜಲ ನಾನಾಗಿದ್ದೆ
ಇದು ಅಹಂಕಾರವಲ್ಲ, ನನ್ನ ಕರ್ತವ್ಯವೆಂದುಕೊಂಡೆ
ಮುಂದೆ ಸಾಗುತ್ತಾ ಹೋದೆ
ಆಗ ಕಂಡೆ ನಾ, ನದಿಯ ದಂಡೆಯಲ್ಲೊಂದು
ನಾಗರೀಕತೆ ಬೆಳೆಯುತ್ತಿತ್ತು
ಮಾನವ ಸಂಘ ಜೀವನಕ್ಕೆ ಅಣಿಯಾಗುತ್ತಿದ್ದ
ಹೀಗೆ ನಾ ಹೋದ ದಾರಿಯಲ್ಲೆಲ್ಲಾ
ಒಂದೊಂದು ದೃಷ್ಯವ ಕಂಡೆ
ಹಲವಾರು ಕೌತುಕಗಳನ್ನು ನೋಡಿದೆ
ನನ್ನ ಪ್ರಯಾಣ ಮುಗಿಯುವ ಹಂತಕ್ಕೆ ಬಂದಿತ್ತು
ನದಿಯು ವಿಶಾಲ ರೂಪವನ್ನು ಪಡೆದಿತ್ತು
ನನ್ನಂತೆಯೇ ಕೋಟ್ಯಾಂತರ
ಹನಿಗಳು ನದಿಯನ್ನು ಸೇರಿ ಕೊಂಡಿದ್ದವು
ನನ್ನ ಮುಂದೆ ವಿಶಾಲ ಸಾಗರ ನಿಂತಿತ್ತು
ಅದುವೇ ನನ್ನ ಗಮ್ಯ ಸ್ಥಾನವಾಗಿತ್ತು
ಅಂತಿಮ ನೆಲೆಯಾಗಿತ್ತು
ಬಿಂದುವಿನ ರೂಪ, ಸಿಂಧು ರೂಪವಾಗಿತ್ತು
ನನ್ನ ಪ್ರಯಾಣ ಮುಕ್ತಾಯವಾಗಿತ್ತು