Sunday, April 3, 2011

ನಿತ್ಯ ಜೀವನದಲ್ಲಿ ಅಂತರ್ಜಾಲ

ನಾನು ಇಂದಿನ ಹಲವಾರು ದಿನ ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿ ಗಮನಿಸಿದ ಅಂಶವೆಂದರೆ, ಅದರಲ್ಲಿ ಅಂತರ್ಜಾಲ ಕುರಿತಾದ ಯಾವುದೇ ಲೇಖನಗಳಿರಲಿ ಅದು ಸಮಾಜಕ್ಕೆ ಮಾರಕ, ಯುವಜನರು ದಾರಿತಪ್ಪುತ್ತಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಸ್ವಲ್ಪ ಯೋಚಿಸಿ ನೋಡಿ, ಅಂತರ್ಜಾಲವಿಲ್ಲದೇ ಇರುತ್ತಿದ್ದರೆನಮ್ಮ ಜೀವನ ಇಷ್ಟು ಸುಸೂತ್ರವಾಗಿ ಸಾಗುತ್ತಿತ್ತೇ? ಬೆಳಗ್ಗಿಂದ ರಾತ್ರೆಯವರೆಗೂ ನಾವು ಒಂದಲ್ಲ ಒಂದು ರೀತಿ ಅಂತರ್ಜಾಲದ ಜಾಲದಲ್ಲಿ ಬಂಧಿತರಾಗಿದ್ದೇವೆ. ಅದು ಹೇಗೆ, ಅಂತರ್ಜಾಲದಿಂದ ನಮಗಾಗುವ ಉಪಯೋಗಗಳೇನು ಅನ್ನುವುದನ್ನ ಸ್ವಲ್ಪ ನೋಡೋಣ.

ಇ-ಪೇಪರ್

ಬೆಳಗ್ಗೆ ಎದ್ದ ಕೂಡಲೇ ದಿನ ಪತ್ರಿಕೆ ಓದುವುದು ಸಾಮಾನ್ಯ ಅಭ್ಯಾಸ, ಮನೆಯಲ್ಲಿ ದಿನಾಲು ಯಾವುದಾದರು ಒಂದು ಪತ್ರಿಕೆಯನ್ನ ತರಿಸುತ್ತೇವೆ; ಆದರೆ ನಮಗೆ ಬೇರೆ ಪತ್ರಿಕೆಯಲ್ಲಿ ಏನು ವಿಶೇಷ? ವಿದೇಶದ ಪತ್ರಿಕೆಯಲ್ಲಿ ಏನು ಇದೆ? ಎಂಬ ಕುತೂಹಲ ಬಂದಾಗ ಅಂಗಡಿಗೆ ಹೋಗಿ ನಾಲ್ಕಾರು ಪತ್ರಿಕೆ ಕೊಂಡು ತಂದರೆ ಜೇಬಿಗೆ ಭಾರ, ಅದಕ್ಕೇ ಸುಲಭ ಉಪಾಯವೆಂದರೆ ಅಂತರ್ಜಾಲ ಪತ್ರಿಕೆ ಅಥವಾ ಈ ಪೇಪರ್. ನಿಮಗೆ ಯಾವ ಪತ್ರಿಕೆಯನ್ನು ಓದಬೇಕೋ ಆ ಪತ್ರಿಕೆಯ ವೆಬ್ ಸೈಟ್ ಗೆ ಹೊದರೆ ಸಾಕು ಕ್ಷಣ ಮಾತ್ರದಲ್ಲಿ ನೀವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮಗೆ ಬೇಕಾದ ಪತ್ರಿಯನ್ನು ಓದಬಹುದು. ಅಷ್ಟೇ ಅಲ್ಲ ಅದರಲ್ಲಿ ಬರೆದಿರುವ ಲೇಖನಗಳಿಗೆ ಪ್ರತಿಕ್ರಿಯೆಗಳನ್ನೂ ಕೊಡಬಹುದು. ಜೊತೆಗೆ ದೈನಂದಿನ ಸುದ್ದಿಗಳಿಗೆಂದೇ ಮೀಸಲಾಗಿರುವ ವೆಬ್ ಸೈಟ್ ಗಳಿವೆ. ಅದರಲ್ಲಿ ಸುದ್ದಿಯ ಜೊತೆಗೇ ಹವಾಮಾನ ವರದಿ, ಟಿವಿ ಕಾರ್ಯಕ್ರಮಗಳು ಇತ್ಯಾದಿ ಎಲ್ಲವನ್ನೂ ನೋಡಬಹುದು. ಅಷ್ಟೇ ಅಲ್ಲ, ಸುದ್ದಿಯಲ್ಲಿರುವ ಫೊಟೊ ಗಳ ಜೊತೆಗೆ ವಿಡಿಯೋ ಕೂಡಾ ನೋಡಬಹುದು.

ಇ-ಬ್ಯಾಂಕಿಂಗ್

ಬ್ಯಾಂಕಿಂಗ್ ವ್ಯವಹಾರ ನಮ್ಮ ದೈಂನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಇನ್ನೊಂದು ವಿಷಯ. ಆದರೆ ಕಚೇರಿ ಕೆಲಸದ ನಡುವೆ ಬ್ಯಾಂಕ್ ಗೆ ಹೋಗಿ ಉದ್ದ ಸರತಿ ಸಾಲಿನಲ್ಲಿ ನಿಂತು ವ್ಯವಹಾರ ಮುಗಿಸಿ ಬರುವುದರಲ್ಲಿ ಸಾಕು ಸಕಾಗುತ್ತದೆ, ಅಲ್ಲದೇ ಅರ್ಧ ದಿನವನ್ನು ಇದಕ್ಕೋಸ್ಕರವಾಗಿಯೇ ಮೀಸಲಾಗಿಡಬೇಕು. ಈ ಎಲ್ಲಾ ಜಂಜಾಟ ಪಾರಾಗಲು ಸುಲಭೋಪಾಯವೆಂದರೆ “ಇ-ಬ್ಯಾಂಕಿಂಗ್”. ಇಂದು ಎಲ್ಲಾ ಬ್ಯಾಂಕ್ ಗಳು ಈ ಸೌಲಭ್ಯವನ್ನು ನೀಡುತ್ತಿವೆ. ನೀವು ಬ್ಯಾಂಕ್ ಗೆ ಒಂದು ಅರ್ಜಿ ಯನ್ನು ಕೊಟ್ಟರೆ ಸಾಕು, ಅವರೇ “ಇ-ಬ್ಯಾಂಕಿಂಗ್” ಖಾತೆಯನ್ನು ಉಚಿತವಾಗಿ ಒದಗಿಸಿಕೊಡುತ್ತಾರೆ. ಇದು ಬಹಳ ಉಪಯೋಗಿ ಅಷ್ಟೇ ಅಲ್ಲ, ಬಹಳಷ್ಟು ಸಮಯವೂ ಉಳಿತಾಯವಾಗುತ್ತದೆ.

ಮನೆಯಲ್ಲಿಯೇ ಕುಳಿತು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಜಮೆ, ಖರ್ಚನ್ನು ನೋಡುವುದರ ಜೊತೆಗೆ, ಇತರರ ಖಾತೆಗೆ ಹಣದ ವರ್ಗಾವಣೆಯನ್ನು ಕ್ಷಣಮಾತ್ರದಲ್ಲಿ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಇ-ಖಾತೆ ಇದ್ದರೆ ಮನೆಯಲ್ಲಿಯೇ ಕುಳಿತು ದೂರವಾಣಿ ಬಿಲ್, ಡಿಟಿಹೆಚ್ ಬಿಲ್ ಇತ್ಯಾದಿಗಳನ್ನು ಪಾವತಿಸಬಹುದು. ನಾವು ಇಂದು ಸಾಮಾನ್ಯವಾಗಿ ಬಳಸುವ ಎಟಿಎಂ ಅನ್ನು ಬಳಸುತ್ತೇವೆ ಇದಕ್ಕೂ ಕೂಡಾ ಅಂತರ್ಜಾಲ ವ್ಯವಸ್ಥೆ ಅತ್ಯಗತ್ಯ. ಅಲ್ಲದೇ ಈ ಸೌಲಭ್ಯ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ನಲ್ಲಿಯೇ ಬ್ಯಾಂಕಿಂಗ್ ಸೌಲಭ್ಯಗಳನ್ನು ಹಲವಾರು ಬ್ಯಾಂಕ್ ಗಳು ಕೊಡಲಾರಂಭಿಸಿವೆ.

ಮಾಹಿತಿ

“ಗೂಗಲ್” ಯಾರಿಗೆ ಗೊತ್ತಿಲ್ಲದ ಹೆಸರು ಹೇಳಿ. ನಿಮಗೆ ಯಾವುದೇ ರೀತಿಯ ಮಾಹಿತಿ ಬೇಕಾದರೂ ಸರಿಯೇ, ಅದು “ಗೂಗಲ್” ನಲ್ಲಿ ಲಭ್ಯ, ಇದು ಇಂಗ್ಲಿಷ್ ಮಾತ್ರ ಅಲ್ಲದೇ, ಕನ್ನಡ ಸೇರಿದಂತೆ ಜಗತ್ತಿನ ಹಲವಾರು ಭಾಷೆಗಳಲ್ಲಿ ಲಭ್ಯವಿದೆ. ನಿಮಗೆ ಯಾವ ವಿಷಯದ ಮಾಹಿತಿ ಬೇಕೆಂದು ಟೈಪಿಸಿ; ಸರ್ಚ್ ಎಂದು ಕೊಟ್ಟರಾಯಿತು, ಅದಕ್ಕೆ ಸಂಬಂಭ ಪಟ್ಟ ನೂರಾರು ವೆಬ್ ಸೈಟ್ ಗಳ ಪುಟಗಳು ತೆರೆದು ಕೊಳ್ಳುತ್ತದೆ. ಮೊಜ಼ಿಲ್ಲಾ, ರೆಡಿಫ಼್ ಸರ್ಚ್, ಇತ್ಯಾದಿ ಅಂತರ್ಜಾಲ ತಾಣಗಳೂ ಇಂಥ ಮಾಹಿತಿಯನ್ನು ಹುಡುಕಲು ನೆರವಾಗುತ್ತವೆ. ಜೊತೆಗೆ “ವಿಕಿಪೀಡಿಯಾ” ಅಂಥ ವಿಶ್ವ ಕೋಷಗಳೂ ಲಭ್ಯವಿದೆ. ಇದರಲ್ಲೂ ಎಲ್ಲಾ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.

ಟಿಕೆಟ್ ಬುಕ್ಕಿಂಗ್

ನಿಮಗೆ ಯಾವುದೋ ಸಿನಿಮಾಗೆ ಹೋಗಬೇಕೆಂದಿಟ್ಟುಕೊಳ್ಳಿ, ಆದರೆ ಸಿನಿಮಾ ಪ್ರಾರಂಭವಾಗುವ ಸಮಯಕ್ಕೆ ಹೋದರೆ ಟಿಕೆಟ್ ಸಿಗುವುದು ಕಷ್ಟ, ಸಿಕ್ಕರೂ ಬೇಕಾದ ಸೀಟ್ ಸಿಗುತ್ತದೋ ಇಲ್ಲವೋ? ಇದಕ್ಕೆ ಸುಲಭೋಪಾಯವೆಂದರೆ ಅಂತರ್ಜಾಲದಲ್ಲಿಂದಲೇ ಟಿಕೆಟ್ ಬುಕ್ಕಿಂಗ್ ಮಾಡುವುದು. “ಬುಕ್ ಮೈ ಶೋ” ಎಂಬಂಥ ಸೈಟ್ ಗೆ ಹೋಗಿ ಅಲ್ಲಿ ಟಿಕೆಟ್ ಬುಕ್ ಮಾಡುವುದಷ್ಟೇ ಅಲ್ಲ, ಅಲ್ಲಿ ನಮಗೆ ಬೇಕಾದ ಸೀಟನ್ನು ಆರಿಸಿಕೊಳ್ಳಬಹುದು. ಅಲ್ಲದೇ ನಾಟಕ, ಹಾಗೂ ಇತರೇ ಕಾರ್ಯಕ್ರಮಗಳಿಗೂ ಕೂಡಾ ಮನೆಯಲ್ಲಿಯೇ ಕುಳಿತು ಟಿಕೆಟ್ ಖರೀದಿಸಬಹುದು.

ಅಷ್ಟೇ ಅಲ್ಲ ಬಸ್, ರೈಲು, ಹಾಗು ವಿಮಾನದ ಟಿಕೆಟ್ ಗಳನ್ನು ಅಂತರ್ಜಾಲದ ಮೂಲಕವೇ ಖರೀದಿಸುವ ಕ್ರಮ ಇಂದು ಜನಪ್ರಿಯ ಗೊಳ್ಳುತ್ತಿದೆ, ಇದು ಬಹಳ ಸುಲಭ, ಸಮಯ ಉಳಿತಾಯವಾಗುವುದಷ್ಟೇ ಅಲ್ಲ, ಇದರಲ್ಲಿ ನಿಮಗೆ ಹಲವಾರು ಬಾರಿ ಆಕರ್ಷಕ ಉಡುಗೋರೆಗಳು, ಕಡಿತಗಳೂ ಸಿಗುತ್ತವೆ. ಇದಕ್ಕೆ ತಗಲುವ ವೆಚ್ಚವನ್ನು “ಇ-ಬ್ಯಾಂಕಿಂಗ್” ಮೂಲಕ ಪಾವತಿಸಬಹುದು.

ಇ-ಮೈಲ್

ಇಂದು ನಾವು ಯಾರ ಬಳಿಯಾಗರೂ ಅವರ ಫೋನ್ ನಂಬರ್ ತೆಗೆದುಕೊಳ್ಳುವುದರ ಜೊತೆಗೆ ಅವರ “ಇ-ಮೈಲ್” ವಿಳಾಸವನ್ನೂ ತೆಗೆದುಕೊಳ್ಳಲು ಮರೆಯುವುದಿಲ್ಲ .ಅಂಚೆಯಣ್ಣನ ದಿನಗಳು ಮಾಯವಾಗುತ್ತಿರುವ ಈ ದಿನಗಳಲ್ಲಿ ಆ ಜಾಗವನ್ನು ಆಕ್ರಮಸಿಕೊಳ್ಳುತ್ತಿರುವುದೇ “ಇ-ಅಂಚೆ” ಅಥವಾ “ಇ-ಮೈಲ್”. ಇದು ಸಂಪೂರ್ಣ ಉಚಿತ ಅಷ್ಟೇ ಅಲ್ಲದೆ, ಕ್ಷಣಮಾತ್ರದಲ್ಲಿ ಜಗತ್ತಿನ ಯಾವ ಮೂಲೆಗೂ ಸಂದೇಷವನ್ನು ರವಾನಿಸಬಹುದು. ಜೊತೆಗೆ, ಫೊಟೋ, ಹಾಡು, ವಿಡಿಯೋ ವನ್ನೂ ಕೂಡಾ ಲಗತ್ತಿಸಿ ಕಳುಹಿಸಬಹುದು. ಇದರಲ್ಲಿ ಪ್ರಸಿದ್ಧವಾಗಿರುವಂಥವು ಜಿ-ಮೈಲ್, ಯಾಹೂ-ಮೈಲ್, ರೆಡಿಫ಼್-ಮೈಲ್ ಇತ್ಯಾದಿ. ಇಲ್ಲಿ ನಮ್ಮ ಇ-ಮೈಲ್ ವಿಳಾಸವನ್ನು ಸೃಷ್ಟಿಸಲು ಕೂಡಾ ಯಾವುದೇ ವೆಚ್ಚ ತಗಲುವುದಿಲ್ಲ.

ಜಿ.ಪಿ.ಎಸ್

ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಎಂಬುದು ಇವತ್ತು ಪ್ರಸಿದ್ಧ ವಾಗುತ್ತಿರುವ ವ್ಯವಸ್ಥೆ, ಪ್ರವಾಸ, ವಾಹನ ಚಲಾಯಿಸುತ್ತಿರುವಾಗ ನಾವು ಯಾವ ಜಾಗದಲ್ಲಿದ್ದೇವೆ? ಯಾವ ರಸ್ತೆಯಲ್ಲಿ ಹೋಗಬೇಕೆಂದು ನಿಖರವಾಗಿ ಮಾಹಿತಿ ಕೊಡುವ ವ್ಯವಸ್ಥೆಯೇ ಜಿ.ಪಿ.ಎಸ್. ಈ ವ್ಯವಸ್ಥೆ ಕೂಡಾ ಕಾರ್ಯನಿರ್ವಹಿಸಲು ಅಂತರ್ಜಾಲದ ವ್ಯವಸ್ಥೆ ಅತ್ಯಗತ್ಯ. ಅಲ್ಲದೇ ಅಂತರ್ಜಾಲದಲ್ಲಿ ಭೂಪಟ ಗಳನ್ನೂ ನೋಡುವ ಸೌಲಭ್ಯವಿರುವುದರಿಂದ ನಾವು ಯಾವುದೋ ಗೊತ್ತಿಲ್ಲದ ಸ್ಥಳಕ್ಕೆ ಹೋಗುವುದಾದರೆ ಅಲ್ಲಿಗೆ ಹೋಗುವ ದಾರಿಯನ್ನು ಮೊದಲೇ ಸರಿಯಾಗಿ ಗುರುತಿಸಿಟ್ಟುಕೊಳ್ಳಬಹುದು.

ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ ಗಳು

ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ಹರಟೆ, ವಿಚಾರ ವಿನಿಮಯ, ಜೊತೆಗೆ ಫೊಟೋ ಇತ್ಯಾದಿಗಳನ್ನು ವಿನಿಮಯ ಮಾಡಿಕೊಳ್ಳಬಹುದಾದ ತಾಣವೇ ಸೋಷಿಯಲ್ ನೆಟ್ ವರ್ಕಿಂಗ್ ತಾಣಗಳು. ಉದಾಹರಣೆಗೆ ಒರ್ಕುಟ್, ಫೆಸ್ ಬುಕ್, ಟ್ವಿಟ್ಟರ್ ಇತ್ಯಾದಿ. ಈ ತಾಣಗಳು ಸಂಪೂರ್ಣವಾಗಿ ಉಚಿತವಾಗಿವೆ. ಇಲ್ಲಿ ನೀವು ಲಾಗ್ ಇನ್ ಮಾಡಿ ನಿಮ್ಮದೊಂದು ಪ್ರೊಪೈಲ್ ಮಾಡಿದರಾಯಿತು. ಅದೇ ತಾಣದಲ್ಲಿರುವ ನಿಮ್ಮ ಸ್ನೇಹಿತರಿರಬಹುದು, ಸಂಬಂಧಿಕರಿರಬಹುದು ಅವರ ಜೊತೆ ಸದಾ ಸಂಪರ್ಕದಲ್ಲಿರಬಹುದು. ಇಲ್ಲಿ ತಮ್ಮ ಸುಳ್ಳು ಪ್ರೊಫೈಲ್ ಗಳನ್ನು ಸೃಷ್ಟಿಸಿ ದುರುಪಯೋಗ ಮಾಡುವವರು ಖಂಡಿತಾ ಇದ್ದಾರೆ. ಆದರೆ ಇಂಥ ತಾಣಗಳಿಂದ ಯುವಜನತೆಯೇ ಹಾಳಾಗುತ್ತಿದೆ ಎನ್ನುವುದೂ ಖಂಡಿತಾ ಸರಿಯಲ್ಲ. ಯಾಕೆಂದರೆ ಇಲ್ಲಿ ಉತ್ತಮ ಸ್ನೇಹಿತರನ್ನು ಪಡೆಯುವುದಷ್ಟೇ ಅಲ್ಲ, ಉತ್ತಮ ವಿಚಾರ ವಿನಿಮಯಗಳನ್ನು ಮಾಡಿಕೊಳ್ಳಲು ಕೂಡಾ ಒಂದು ವೇದಿಕೆಯಾಗಿದೆ.

ವಾಣಿಜ್ಯ ವ್ಯವಹಾರ

ಹೌದು, ಇಂದು ವಾಣಿಜ್ಯ ಲೋಕದಲ್ಲಿ ಕೂಡಾ ಅಂತರ್ಜಾಲ ತನ್ನ ಜಾಲವನ್ನು ಹರಡಿದೆ. ನೀವು ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಳ್ಳುವವರಾಗಿದ್ದರೆ; ಮುಂಚಿನ ದಿನಗಳಲ್ಲಿ ದಿನಪತ್ರಿಕೆಗಳಲ್ಲಿ ಮಾರುಕಟ್ಟೆಯ ಏರಿಳಿತಗಳನ್ನು ನೋಡಿ ನಂತರ ಷೇರು ಖರೀದಿ ಮಾಡಬೇಕಾಗಿತ್ತು. ಇಂದು ಹಾಗಲ್ಲ ಮನೆಯಲ್ಲಿಯೇ ಕುಳಿತು ಅಂತರ್ಜಾಲದಲ್ಲಿ ಬರುವ ವಾಣಿಜ್ಯ ಸಂಬಂಧೀ ವೆಬ್ ಸೈಟು ಗಳನ್ನು ನೋಡಿಕೊಂಡು ನಿಮ್ಮ ಶೇರು ವ್ಯವಹಾರವನ್ನು ಮಾಡಬಹುದು. ಹಾಗಾಗಿ ಇಂದಿನ ಇಡೀ ವಿಶ್ವದ ವಾಣಿಜ್ಯ ವ್ಯವಹಾರವನ್ನು ಒಂದೇ ಕಡೆ ಒಗ್ಗೂಡಿಸಿರುವುದು ಅಂತರ್ಜಾಲವೆಂದರೆ ತಪ್ಪಾಗಲಾರದು.

ಜಾಹೀರಾತು ಪ್ರಪಂಚ

ಇಂದಿನ ಜಾಹಿರಾತು ಪ್ರಪಂಚದಲ್ಲಿ ಅಂತರ್ಜಾಲದ ಕೊಡುಗೆ ಬಹಳ ದೊಡ್ಡದು. ನೀವು ಯಾವುದೇ ವೆಬ್ ಪೇಜನ್ನು ತೆರೆದು ನೋಡಿ, ಅದರಲ್ಲಿ ಒಂದಲ್ಲೊಂದು ಜಾಹೀರಾತನ್ನು ನೀವು ಕಾಣಬಹುದು. ಇದು ಬಹಳ ಕಡಿಮೆ ವೆಚ್ಚವಷ್ಟೇ ಅಲ್ಲ, ಬಹಳ ಆಕರ್ಷಕವಾಗಿ ಕಾಣುತ್ತದೆ, ಹಾಗೂ ಜಗತ್ತಿನಾದ್ಯಂದ ಜಾಹೀರಾತುಗಳನ್ನು ಪ್ರಸಾರಿಸಬಹುದು. ಇಂದು ಅಂತರ್ಜಾಲದ ಜಾಹೀರಾತು ಉದ್ಯಮ ಕೂಡಾ ಬಹಳ ವೇಗವಾಗಿ ಬೆಳೆಯುತ್ತಿದೆ. ಇದು ಇಂದು ಹಲವಾರು ಜನರಿಗೆ ಉದ್ಯೋಗವನ್ನು ಕೂಡಾ ಕಲ್ಪಿಸಿ ಕೊಟ್ಟಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರ್ಜಾಲ

SSLC ಅಥವಾ PUC ಮುಗಿದ ತಕ್ಷಣ ಇನ್ಯಾವ ಕಾಲೇಜಿಗೆ ಸೇರಬೇಕು ಎನ್ನುವ ಚಿಂತೆ ಎಲ್ಲರಿಗೂ ಇರುತ್ತದೆ. ಇದಕ್ಕೋಸ್ಕರ ಊರಿಂದೂರಿಗೆ ಕಾಲೇಜುಗಳನ್ನು ಹುಡುಕುತ್ತಾ ಹೋಗುವುದಂತೂ ಸಾಧ್ಯವಿಲ್ಲದ ಮಾತು. ಇದಕ್ಕೆ ಸುಲಭೋಪಾಯವೆಂದರೆ ಅಂತರ್ಜಾಲದ ಮೊರೆ ಹೋಗುವುದು. ನೀವು ಗೂಗಲ್ ವೆಬ್ ಸೈಟ್ ಗೆ ಹೋಗಿ ನಿಮಗೆ ಬೇಕಾದ ಕಾಲೇಜು ಅಥವಾ ಸೇರಬೇಕಾಗಿರುವ ಕೋರ್ಸಿನ ಹೆಸರನ್ನು ಕೊಟ್ಟರಾಯಿತು, ಕ್ಷಣಮಾತ್ರದಲ್ಲಿ ಎಲ್ಲಾ ಮಾಹಿತಿಗಳೂ ನಿಮ್ಮ ಮುಂದಿರುತ್ತದೆ. ಬರಿ ನಮ್ಮ ರಾಜ್ಯ, ದೇಶದಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲದೇ ವಿಶ್ವದ ಯಾವುದೇ ಮೂಲೆಯ ಶಾಲಾ ಕಾಲೇಜುಗಳ ವಿವರಗಳೂ ಲಭ್ಯವಾಗುತ್ತವೆ.

ಇಷ್ಟೇ ಅಲ್ಲ. ಇಂದಿನ ದಿನಗಳಲ್ಲಿ ಕಾಲೇಜು ಪ್ರವೇಶ ಪರೀಕ್ಷೆಗಳೂ ಅಂತರ್ಜಾಲದ ಮೂಲಕವೇ ನಡೆಯುತ್ತಿವೆ. ಅಲ್ಲದೇ ಫಲಿತಾಂಶವನ್ನು ಕೂಡಾ ಮನೆಯಲ್ಲಿಯೇ ಕುಳಿತು ನೋಡಬಹುದು. ನಂತರ CET ಕೌಂಸೆಲಿಂಗ್ ನಂಥ ವ್ಯವಸ್ಥೆಯಮೂಲಕ ನಿಮಗೆ ಬೇಕಾದ ಕಾಲೇಜನ್ನು ಕೂಡಾ ಅಂತರ್ಜಾಲದ ಮುಖಾಂತರ ಆರಿಸಿಕೊಳ್ಳುವ ವ್ಯವಸ್ಥೆ ನಿಮಗೆ ಗೊತ್ತೇ ಇದೆ.

ವಿದೇಶ ಗಳಲ್ಲಂತೂ ಈ ವ್ಯವಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಮನೆಯಲ್ಲಿಯೇ ಕುಳಿತು ಕೊಂಡು ಅಂತರ್ಜಾಲದ ಮುಖಾಂತರ ಪಾಠಗಳನ್ನು ಕೇಳಬಹುದು. ಅಲ್ಲದೇ ಪರೀಕ್ಷೆಯನ್ನೂ ಕೂಡಾ ಮನೆಯಿಂದಲೇ ಬರೆದು, ನಿಮ್ಮ ಡಿಗ್ರೀ ಪ್ರಮಾಣ ಪತ್ರ ನಿಮ್ಮ ಮನೆಯಬಾಗಿಲಿಗೇ ತಲುಪುತ್ತದೆ.

ಇ- ಗ್ರಂಥಾಲಯ

ಇಂದು ಪುಸ್ತಕ ತಂದು ಓದುವ ಹವ್ಯಾಸ ಕಮ್ಮಿಯಾಗುತ್ತಿದೆ, ಗ್ರಂಥಾಲಯ ಗಳಿಗೆ ಹೋಗುವ ಅಭ್ಯಾಸವೂ ಕಮ್ಮಿಯಾಗುತ್ತಿದೆ. ಇದರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದೇ ಇ-ಗ್ರಂಥಾಲಯಗಳು. ಇದು ಇನ್ನೂ ಭಾರತದಲ್ಲಿ ಅಷ್ಟಾಗಿ ಅಭಿವೃದ್ಧಿ ಗೊಂಡಿಲ್ಲ, ಆದರೆ ಪಾಶ್ಚಿಮಾತ್ಯ ದೇಷಗಳಲ್ಲಿ ಇದು ವೇಗವಾಗಿ ಬೆಳೆಯುತ್ತಿದೆ. ಅಂತರ್ಜಾಲ ತಾಣಗಳಿಗೆ ಹೋಗಿ ನೇರವಾಗಿ ಅಥವಾ ಡವ್ನ್ ಲೋಡ್ ಮಾಡಿಕೊಂಡು ನಂತರ ಓದಬಹುದು. ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಐ ಫೋನ್” ನಂಥ ಆಧುನಿಕ ಸಲಕರಣೆಗಳು ಅಂಗೈ ಯಲ್ಲಿಯೇ ಇಡೀ ಗ್ರಂಥಾಲಯವನ್ನು ನಿಮ್ಮ ಮುಂದೆ ತೆರೆದಿಡುತ್ತದೆ.

ವೈವಾಹಿಕ ಪ್ರಪಂಚದಲ್ಲಿ ಅಂತರ್ಜಾಲ

ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸ್ಪಟ್ಟಿರುತ್ತವೆ ಎಂಬ ಮಾತು ಇದೆ. ಆದರೆ ಇದು ಇಂದು ಬದಲಾಗಿ ಮದುವೆ ಅಂತರ್ಜಾಲದಲ್ಲಿ ನಿರ್ಧರಿಸ್ಪಡುತ್ತವೆ ಎನ್ನಬಹುದು. ಹಿಂದಿನ ಕಾಲದಲ್ಲಿ ಒಂದು ಗಂಡು ಅಥವಾ ಹುಡುಗಿ ಹುಡುಕುವುದೆಂದರೆ ಎಷ್ಟು ಕಷ್ಟವಾಗಿತ್ತಲ್ಲವೇ, ದಲ್ಲಾಳಿ, ಅಥವಾ ಯಾರಾದರೂ ಸಂಬಂಧಿಕರು ಇತ್ಯಾದಿಗಳ ಮುಖಾಂತರ ಮದುವೆಗಳು ನಡೆಯುತ್ತಿದ್ದವು. ಆದರೆ ಇಂದು ಕಾಲ ಬದಲಾಗಿದೆ. ಅಂತರ್ಜಾಲ ತಾಣದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಂಡರಾಯಿತು. ಭಾವಚಿತ್ರ ದೊಂದಿಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಮನಸ್ಸಿಗೊಪ್ಪುವ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬಹುದು.

ಹೀಗೆ ಇಂದು ನಮ್ಮ ಜೀವನದಲ್ಲಿ ಅಂತರ್ಜಾಲ ಹೇಗೆ ಹಾಸು ಹೊಕ್ಕಾಗಿದೆಯಲ್ಲವೇ? ಹೀಗಾಗಿ ನಮ್ಮ ಇಂದಿನ ಜೀವನವನ್ನು ಸುಲಭಗೊಳಿಸುತ್ತಿರುವ ಅಂತರ್ಜಾಲ ವ್ಯವಸ್ಥೆ ಸಮಾಜಕ್ಕೆ ಮಾರಕ,ಯುವಜನತೆ ಹಾಳಾಗುತ್ತಿದೆ ಎಂದು ದೂಷಿಸಿದರೆ ಹೇಗೆ. ನಿಜ ಅಂತರ್ಜಾಲದಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯನ್ನುಂಟುಮಾಡುವ ವಿಷಯಗಳೂ ಇರುತ್ತವೆ, ಇದರ ಬಗ್ಗೆ ಜಾಗೃತವಾಗಿರ ಬೇಕು. ಇದನ್ನು ಹೇಗೆ ಉಪಯೋಗಿತ್ತೇವೆ ಎಂಬುದು ನಮ್ಮ ಕೈಯಲ್ಲಿದೆ ಅಷ್ಟೆ.