Thursday, January 21, 2010

ನಾನು ಸಾಂಬಾರ್ ಮಾಡಿದ್ದು...

ಇಲ್ಲಿ (ಅಂದರೆ ದೆಲ್ಲಿಯಲ್ಲಿ) ನಾನು ಇರುವ ಪಕ್ಕದ flat ನಲ್ಲಿ ನನ್ನ ಥರಾನೇ 5 ಜನ ಕನ್ನಡಿಗರು ಇದ್ದಾರೆ.. ಅವರೂ ಬ್ಯಾಚುಲರ್ಸೇ.. ಹಾಗಾಗಿ ಟೈಮ್ ಪಾಸ್ ಗೆ ಅಂತ ಅಲ್ಲಿಗೆ ಹೋಗುತ್ತಾ ಇರುತ್ತೇನೆ. ಹೀಗೆ ಕಳೆದ ವಾರ ಹೋದಾಗ ಚಪಾತಿ ಮಾಡೋಣ ಅನ್ನುವ idea ಬಂತು. ಸರಿ ನಾನು ಮತ್ತು ವಾಮನ ಎಂಬ ಇಬ್ಬರು ಸೇರಿ ಹಿಟ್ಟು ಕಲಿಸಿದ್ದಾಯಿತು. ಈಗ ಚಪಾತಿ ಜೊತೆಗೆ ತಿನ್ನಲು ಏನಾದರು ಬೇಕಲ್ಲವೇ? ನಾನು ಆಲೂ ಮಟರ್ (ಆಲೂಗಡ್ಡೆ ಮತ್ತು ಹಸಿ ಬಟಾಣಿ ಸೇರಿಸಿ ಮಾಡುವ ಒಂದು ಬಗೆಯ ಸಾಂಬಾರ್) ಮಾಡುತ್ತೇನೆ, ಅದಕ್ಕೆ ನೀನು ಹೋಗಿ ಹಸಿ ಬಟಾಣಿ ತೆಗೆದುಕೊಂಡು ಬಾ ಎಂದು ಶೈಲೇಶ್ ಎಂಬವನನ್ನು ಕಳುಹಿಸಿದ್ದಾಯಿತು.

ಈ ಕಡೆ ಚಪಾತಿ ಲಟ್ಟಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಶೈಲೇಶನೋ ಬಟಾಣಿ ತರಲು ಹೋದವ ಪತ್ತೆ ಇಲ್ಲ.. ಫೊನ್ ಮಾಡಿ ಬೇಗ ಬಾ ಮಾರಾಯಾ ಎಂದು ಕರೆದೆ... ಉಳಿದ ಎಲ್ಲರೂ ಟಿವಿ ಯಲ್ಲಿ ಕ್ರಿಕೆಟ್ ನೋಡುವುದರಲ್ಲಿ ಮಘ್ನರಾಗಿದ್ದರು. ಬಟಾಣಿ ತರಲು ಹೋದ ಜನ ವಾಪಸು ಬಂದಮೇಲೆ ಚಪಾತಿ ಸುಡುವ ಜವಾಬ್ದಾರಿಯನ್ನು ಅವನಿಗೆ ವಹಿಸಿದ್ದಾಯಿತು.. ಚಪಾತಿಯೋ ರೋಟಿ, ನಾನ್ ಗಳ ರೂಪ ಪಡೆಯುತ್ತಿದ್ದವು. ಮಧ್ಯದಲ್ಲಿ ಕೆಲವು ಸರಿಯಾಗಿ ಬರುತಿದ್ದವು...

ನಾನು ಈ ಮಧ್ಯ ಸಾಂಬಾರ್ ಮಾಡುವ ತಯ್ಯಾರಿಯಲ್ಲಿ ತೊಡಗಿದೆ. ನಿಜ ಹೇಳ ಬೇಕೆಂದರೆ ನನಗೆ ಆಲೂಮಟರ್ ಮಾಡುವ ಸರಿಯಾದ ವಿಧಾನ ಗೊತ್ತಿರಲಿಲ್ಲ. ಗೊತ್ತಿದೆ ಎಂದು ಒಪ್ಪಿಕೊಂಡಾಗಿದೆ, ಹಿಂಜರಿಯುವಂತಿಲ್ಲ, ಮರ್ಯಾದೆ ಪ್ರಶ್ನೆ.. ಆಲೂಗಡ್ಡೆ ಕಟ್ ಮಾಡಿ, ಬಟಾಣಿ ಸುಲಿದು, ಇದ್ದ 2 ಟೊಮೆಟೋ ಹಣ್ಣನ್ನೂ ಕೊಚ್ಚಿ ಹಾಕಿ ಒಲೆಯ ಮೇಲೆ ಬೇಯಲು ಇಟ್ಟದ್ದಾಯಿತು. 10 ನಿಮಿಷ ಕಳೆಯಿತು, 15 ನಿಮಿಷ ಕಳೆಯಿತು.. ಆಲೂಗಡ್ಡೆ ಯಾಗಲೀ, ಬಟಾಣಿಯಾಗಲೀ ಬೇಯುವ ಯಾವ ಲಕ್ಷಣಗಳೂ ಕಾಣಲಿಲ್ಲ.. ಘಂಟೆ ಬೇರೆ 10 ಆಗುತ್ತಾ ಬಂದಿತ್ತು (ರಾತ್ರೆ) ಮತ್ತೇನು ಮಾಡುವುದು ಎಂದು ತಿಳಿಯದೇ ಸಂಪೂರ್ಣ ಮಿಶ್ರಣವನ್ನು ಕುಕ್ಕರ್ ಗೆ ವರ್ಗಾವಣೆ ಮಾಡಿ ಪುನಃ ಬೇಯಲು ಇಟ್ಟೆ..

ದೇವರ ದಯೆ ನನ್ನ ಮೇಲಿತ್ತು ಕಾಣುತ್ತದೆ. ಕುಕ್ಕರ್ 5-6 ಸೀಟಿ ಹೊಡೆದ ಮೇಲೆ ತೆರೆದು ನೋಡಿದಾಗ ತರಕಾರಿ ಬೆಂದಿತ್ತು. ಮತ್ತೆ ಇದನ್ನು ಬಾಣಲೆಗೆ ಹಾಕಿದಾಗ ನೀರು ಜಾಸ್ತಿಯಾದದ್ದು ಗೊತ್ತಾಯಿತು.. ಈಗ ಉಳಿದದ್ದು ಒಂದೇ ದಾರಿ.. ಇದನ್ನು ಸರಿಯಾಗಿ ಕುದಿಸಿಯೇ ನೀರನ್ನು ತೆಗೆಯಬೇಕಿತ್ತು. ಸ್ವಲ್ಪ MTR ಸಾಂಬಾರ್ powder ಮತ್ತು ಉಪ್ಪು ಹಾಕಿ ಕುದಿಯಲು ಬಿಟ್ಟೆ. 10 ನಿಮಿಷ ಬಿಟ್ಟು ನೋಡಿದಾಗ ನನ್ನ ಈ ಪ್ರಯೋಗ ಒಂದು ಹದಕ್ಕೆ ಬಂದಿತ್ತು. ಇಷ್ಟೆಲ್ಲಾ ಆಗುವಾಗ ಘಂಟೆ 10.30 ದಾಟಿದೆ... ಬೇಗನೆ ಊಟಕ್ಕೆ ಕೂತು ಆನ್ನ, ಚಪಾತಿ ಬಡಿಸಿಕೊಂಡು ನಾನು ಮಾಡಿದ ಈ ಹೊಸ ರುಚಿಯನ್ನೂ ಹಾಕಿಕೊಂಡು ಒಂದು ತುತ್ತು ಅನ್ನ ಬಾಯಿಗಿಟ್ಟೆ... .. ನಿಜವಾಗಿಯೂ ದೇವರ ದಯೆ; ಸಾಂಬಾರ್ ಮಾತ್ರ ಅದ್ಭುತ ರುಚಿಯಾಗಿತ್ತು. ಅದು ಹೇಗೆ ಆಯಿತು ಎಂಬುದು ಮಾತ್ರ ಚಿದಂಬರ ರಹಸ್ಯ. ಎಲ್ಲರ ಮುಖ ನೋಡಿದೆ ಚಪ್ಪರಿಸಿ ತಿನ್ನುತ್ತಿದ್ದಾರೆ. ಬದುಕಿದೆಯಾ ಬಡಜೀವವೆ ಅಂದುಕೊಂಡೆ. ಮತ್ತು ಆವತ್ತೇ deside ಮಾಡಿದೆ ಇನ್ನು ಮುಂದೆ ಇನ್ನೊಬ್ಬರ ಮನೆಗೆ ಹೋದಾಗ ಖಂಡಿತವಾಗಿಯೂ ಹೊಸ ರುಚಿಯ ಪ್ರಯೋಗಕ್ಕೆ ಮಾತ್ರ ಕೈ ಹಾಕುವುದಿಲ್ಲ...

Monday, January 18, 2010

25 ರೂಪಾಯಿಯ ಟೀ.....

ಈ ಘಟನೆ ನಡೆದದ್ದು ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿ ಜಮ್ಮುವಿಗೆ ಹೋಗುವಾಗ... ದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಕಾಯುತ್ತಾ ನಿಂತಿದ್ದೆವು. ನಮ್ಮ ತಂಡದಲ್ಲಿ ಇಬ್ಬರು ವಿವಾಹಿತರೂ ಇದ್ದರು.. (ಅಂದರೆ ಸಂಸಾರ ಸಮೇತರಾಗಿ ನಮ್ಮ ಜೊತೆಗೆ ಬಂದವರು.) ಉಳಿದ ನಾವೆಲ್ಲರು ಬ್ಯಾಚುಲರ್ಸು.... ಒಟ್ಟು ಮಕ್ಕಳು ಸೇರಿ 13 ಜನರ ತಂಡ ನಮ್ಮದು..

ಹೀಗೆ ರೈಲಿಗೆ ಕಾದುನಿಂತಿದ್ದಾಗ ನಮ್ಮಲ್ಲೊಬ್ಬರಿಗೆ ಟೀ ಕುಡಿಯುವ ಮನಸ್ಸಾಯಿತು. ಅವರು ಅಲ್ಲೇ ಇದ್ದ ರೈಲ್ವೆ ಕ್ಯಾಂಟೀನ್ ಗೆ ಹೋಗಿ ಟೀ ತೆಗೆದುಕೊಂಡು ಬಂದರು. ಬಂದು ನಮ್ಮಲ್ಲಿ "ಟೀ ತುಂಬಾ ಚೆನ್ನಾಗಿದೆ ನೀವು ಕುಡಿಯಿರಿ" ಎಂದಾಗ; ರಾತ್ರೆ ಸಮಯ ವಾದ್ದರಿಂದ ಚಳಿಗೂ ಆಯ್ತು ಎಂದುಕೊಂಡು ನಾನು ಮತ್ತು ಗುರುಚರಣ್ ಇಬ್ಬರೂ ಟೀ ತರಲು ಕ್ಯಾಂಟೀನ್ ಕಡೆಗೆ ಹೊರಟಾಗ "ನನಗೂ ಒಂದು.. ನನಗೂ ಒಂದು.." ಎಂಬ 5 ಟೀ order ನೊಂದಿಗೆ ಹೋಗಿ 5 ಟೀ ಕೊಡು ಎಂದೆ (ಹಿಂದಿಯಲ್ಲಿಯೇ). ಕೊಟ್ಟನಂತರ "ಕಿತ್ನಾ" (ಎಷ್ಟು?) ಎಂದೆ.. ಅವನು "ಪಚ್ಚೀಸ್" (ಇಪ್ಪತ್ತೈದು) ಅಂದ... ನಾನೋ ಒಂದು ಟೀ ಗೆ ಇಪ್ಪತ್ತೈದು ಅಂದುಕೊಂಡು ಎನು ಮಾಡುವುದು ಎಂದು ತಿಳಿಯದೆ ತಲೆ ಬಿಸಿಯಾಗಲು ಪ್ರಾರಂಭವಾಯಿತು. ಟೀ ತೆಗೆದುಕೊಂಡಾಗಿದೆ. ಬೇಡ ಅನ್ನುವಂತಿಲ್ಲ. ಎನಾದರಾಗಲಿ ಮತ್ತೊಮ್ಮೆ confirm ಮಾಡಿಕೊಳ್ಳೋಣ ಎಂದುಕೊಂಡು "total ಕಿತ್ನಾ ಹುವಾ?" (ಒಟ್ಟು ಎಷ್ಟಾಯಿತು?") ಎಂದು ಕೇಳಿದೆ. ಅವನು ಮತ್ತೊಮ್ಮೆ "ಪಚ್ಚೀಸ್" ಎಂದ.. ಆಗ ನಾನು ಸ್ವಲ್ಪ ಉಸಿರು ಬಿಟ್ಟುಕೊಂಡು "ಭಾಯಿ ಸಾಬ್, ಮೈ ಎಕ್ ಚಾಯ್ ಕಾ ಪಚ್ಚಿಸ್ ಸಮ್ ಝಾ ಥಾ..." (ಸ್ವಾಮೀ ನಾನು ಒಂದು ಟೀ ಗೆ ಇಪ್ಪತ್ತೈದು ಅಂದುಕೊಂಡಿದ್ದೆ..) ಅಂದಾಗ ಅವನು "ಕೃಪಾ ಕರ್ ಕೆ ಆಪ್ ಕಾ ಪೈರ್ ದಿಖಾವೋ.." (ದಯವಿಟ್ಟ್ಟು ತಮ್ಮ ಪಾದ ತೋರಿಸಿ ಅನ್ನಬೇಕೆ...)

Saturday, January 16, 2010

ಸನ್ಮಾನ್ಯ ಸಭಾ ಅಧ್ಯಕ್ಷರೇ.......

ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ, ಮಾಳ

"ಸನ್ಮಾನ್ಯ ಸಭಾ ಅಧ್ಯಕ್ಷರೇ, ಪೂಜ್ಯನೀಯ ಗುರುಗಳೇ ಹಾಗೂ ನನ್ನ ನೆಚ್ಚಿನ ಸಹಪಾಠಿಗಳೇ... ನಾನು ಇಂದು ಪ್ರಜಾಪ್ರಭುತ್ವ ದಿನಾಚರಣೆಯ ಬಗ್ಗೆ ಒಂದೆರಡು ಮಾತುಗಳನ್ನು ಆಡಲು ಇಚ್ಛಿಸುತ್ತೇನೆ............"

ಇದು ನಾನು ಪ್ರೈಮರಿ ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವ ಇತ್ಯಾದಿ ಸಮಾರಂಭಗಳಲ್ಲಿ ಮಕ್ಕಳು ಮಾಡುತ್ತಿದ್ದ ಭಾಷಣದ ತುಣುಕುಗಳು... ನನಗೆ ಇದು ಯಾಕೆ ನೆನಪಿಗೆ ಬಂತೆಂದರೆ ಇನ್ನು ಕೆಲವೇ ದಿನಗಳಲ್ಲಿ ಜನವರಿ ಇಪ್ಪತ್ತಾರು ಬರಲಿದೆಯಲ್ಲವೇ..

ನಾನು ಓದಿದ್ದು ಹಳ್ಳಿ ಶಾಲೆಯಲ್ಲಿ.. ಅಲ್ಲದೆ ಆಗಿನ ದಿನಗಳು ಈಗಿನ ಮೋಡರ್ನ್ ಶಾಲಾದಿನಗಳಂತಿರಲಿಲ್ಲ.. ಮಧ್ಯಮ ಮತ್ತು ಬಡ ಕುಟುಂಬ ಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಂದ ಕೂಡಿದ ಆ ದಿನಗಳು ನಿಜಕ್ಕೂ ಅವಿಸ್ಮರಣೀಯ...

ಯಾವುದೇ ರಾಷ್ಟ್ರೀಯ ಹಬ್ಬಗಳ ದಿನದ ಎರಡು ದಿನ ಮೊದಲೇ ನಮಗೆಲ್ಲಾ ಸಂಭ್ರಮ, ಸಡಗರ (ನಿಜವಾದ ಕಾರಣವೇನೆಂದರೆ, ಆವತ್ತು ರಜೆ, ಹಾಗೂ ಚಾಕೋಲೇಟ್ ಸಿಗುವುದರಿಂದ). ಸಮವಸ್ತ್ರವನ್ನು ನೀಟಾಗಿ ಒಗೆದು ಅದಕ್ಕೆ ಇಸ್ತ್ರಿ ಹಾಕಿ, ಅಲಮಾರಿಯ ಮೂಲೆಯಲ್ಲಿರುವ ಧ್ವಜವನ್ನು ತೆಗೆದು ಅದನ್ನು ಕಟ್ಟಲು ಪೈಪು ಅಥವಾ ಉದ್ದ ಕೋಲನ್ನೂ ತಯ್ಯಾರುಮಾಡುವ ಕಾರ್ಯಕ್ರಮ ವಿರುತ್ತಿತ್ತು.. (ನನ್ನಬಳಿ ಬಟ್ಟೆಯ ಧ್ವಜವಿದ್ದುದರಿಂದ ಅದನ್ನುಕಟ್ಟಲು ಕೋಲು ಬೇಕಾಗುತ್ತಿತ್ತು.)

ಬೆಳಗ್ಗೆ ಸ್ವಲ್ಪ ಬೇಗನೇ ಎದ್ದು ಅಮ್ಮನೊಂದಿಗೆ ಶಾಲೆಗೆ ಹೊರಡುತ್ತಿದ್ದೆ.. (ಹೌದು ನಾನು ಕಲಿತದ್ದು ನನ್ನ ತಾಯಿ ಟೀಚರ್ ಆಗಿದ್ದ ಶಾಲೆಯಲ್ಲಿಯೇ) ಹೋದಕೂಡಲೇ ಮುಖ್ಯೋಪಾಧ್ಯಾಯರು ಅಯಾ ತರಗತಿಗಳಿಗೆ ಅವರ ವಯಸ್ಸಿಗೆ ತಕ್ಕಂತೆ ಕೆಲಸಗಳನ್ನು ಹಂಚುತ್ತಿದ್ದರು. ಮುಖ್ಯವಾಗಿ ಕೆಲಸಗಳು ಸಿಗುತ್ತಿದ್ದುದು 5 ನೇ ಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ. ಅದರಲ್ಲಿ ಮುಖ್ಯವಾದುವೆಂದರೆ ಸಭಾಂಗಣದ ತಯ್ಯಾರಿ, ಬೆಂಚು ಡೆಸ್ಕುಗಳ ಜೋಡಣೆ, ಧ್ವಜಸ್ಥಂಬದ ತಯ್ಯಾರಿ ಇತ್ಯಾದಿ..


ಶಾಲಾ ಧ್ವಜ ಸ್ತಂ

ಎಲ್ಲಾತಯ್ಯಾರಿ ಆದನಂತರ ಧ್ವಜಾರೋಹಣ ಕಾರ್ಯಕ್ರಮ. ಊರಿನ ಗಣ್ಯ ವ್ಯಕ್ತಿ ಎಂದೆನಿಸಿಕೊಂಡವರಿಂದ ಇದನ್ನು ನಡೆಸಲಾಗುತ್ತಿತ್ತು. ಆಮೇಲೆ ಅವರು ನಮಗೆ ಶುಭಾಷಯಗಳನ್ನು ಹೇಳಿದನಂತರ ನಮ್ಮ ನಿಜವಾದ ಕಾರ್ಯಕ್ರಮ ಪ್ರಾರಂಭ ವಾಗುತ್ತಿತ್ತು ಅದುವೇ ಪ್ರಭಾತಫೇರಿ.. ಅಥವಾ march fast ಶಾಲೆಯಿಂದ ಹೊರಟ ಈ ನಮ್ಮ ಮೆರವಣಿಗೆ ಊರಿನ ಮುಖ್ಯ ಬೀದಿಯಿಂದ ಹಾದು ಸ್ವಲ್ಪ ದೂರದ ವರೆಗೂ ಹೋಗಿ ನಂತರ ಹಿಂತಿರುಗಿ ಬರುತ್ತಿದ್ದೆವು. ಹೀಗೆ ಹಾದುಹೋಗುವಾಗ ಅಂಗಡಿ ಮುಂಗಟ್ಟುಗಳನ್ನು ಹಾದು ಹೋಗಬೇಕಾದ್ದರಿಂದ ಎಲ್ಲಾ ಅಂಗಡಿಯವರು ನಮಗೆ ಚೊಕೊಲೇಟ್ ಗಳನ್ನು ಹಂಚುತ್ತಿದ್ದರು. ಹೀಗಾಗಿ ನಮಗೆ ಎನಿಲ್ಲವೆಂದರು 10 ಚೊಕೊಲೇಟ್ ಆವತ್ತು ಸಿಗುತ್ತಿದ್ದುದು ಗ್ಯಾರೆಂಟಿಯಾಗಿತ್ತು. ಹೀಗೆ ಮೆರವಣಿಗೆ ಹೋಗುವಾಗ "ಮಹಾತ್ಮಾ ಗಾಂಧೀಜೀ ಕೀ ಜೈ", "ಸುಭಾಶ್ ಚಂದ್ರ ಬೋಸ್ ಕೀ ಜೈ" ಎಂದು ಜೈಕಾರ ಹಾಕುವುದೂ ಒಂದು ಸಂಭ್ರಮ.

ಶಾಲೆಗೆ ಹಿಂತಿರುಗಿದ ನಂತರ ಸಭಾಕಾರ್ಯಕ್ರಮ ಪ್ರಾರಂಭವಾಗುತ್ತಿತ್ತು... ಆರಂಭದಲ್ಲಿ ಅಧ್ಯಾಪಕರು, ಮುಖ್ಯ ಅಥಿತಿಗಳ ಭಾಷಣಗಳು ಮುಗಿದ ನಂತರ ನಮ್ಮ ಅಂದರೆ "ವಿದ್ಯಾರ್ಥಿಗಳಿಂದ ಎರಡು ಮಾತುಗಳು" ಪ್ರಾರಂಭ. ನಡಗುವ ಕೈಕಾಲು, ಒಣಗಿದ ನಾಲಗೆ ಯಿಂದ ಹಾಗೋ ಹೀಗೋ ಸ್ಟೇಜ್ ಹತ್ತುತ್ತಿದ್ದೆ.. ಅಲ್ಲಿಯೋ ಎಲ್ಲರೂ ನನ್ನನ್ನೇ ಕೆಕ್ಕರಿಸಿ ನೋಡುವಂತೆ ಭಾಸವಾಗಬೇಕೆ... ಅಂತು ಅಲ್ಪ ಸ್ವಲ್ಪ ಧೈರ್ಯವನ್ನು ಒಗ್ಗೂಡಿಸಿ " ಸನ್ಮಾನ್ಯ ಸಭಾ ಅಧ್ಯಕ್ಷರೇ.... " ಪ್ರಾರಂಭಿಸುತ್ತಿದ್ದೆ.. ಒಂದೆರಡು ಪ್ಯಾರಾ ಮುಗಿಸಿ ಮುಖ್ಯ ವಿಷಯಕ್ಕೆ ಬರುತ್ತಿದ್ದಂತೆಯೇ ಹಾಳಾದ ಮರೆವು ಅದೇನು ತಯ್ಯಾರಿ ಮಾಡಿಕೊಂದು ಬಂದ್ದಿದ್ದೇವೆಂದು ಮರೆತು ಹೋಗಬೇಕೆ.. ಸ್ವಲ್ಪ ಹೊತ್ತು ತಡಕಾಡಿ ಜಪ್ಪಯ್ಯ್ಯಾ ಅಂದರೂ ನೆನಪಿಗೆ ಬರುವುದಿಲ್ಲ ಅಂದಮೇಲೆ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದ್ದೆ.. ಅದೇ ಜೇಬಿನಲ್ಲಿರುವ ಭಾಷಣದ ಚೀಟಿ. ಅದನ್ನು ಮೆಲ್ಲಗೆ ಹೊರ ತೆಗೆದು ಯಾರಿಗೂ ಕಾಣಿಸದಂತೆ ಬಿಡಿಸಿ (??!!) ಮುಂದಿನ ಸಾಲುಗಳನ್ನು ಖಚಿತ ಪಡಿಸಿಕೊಂಡ ನಂತರ ಭಾಷಣವನ್ನು ಮುಂದುವರೆಸುತ್ತಿದ್ದೆ. ಬಹಳ ಕಷ್ಟಪಟ್ಟು ತಯ್ಯಾರಿಸಿದ ಈ ಭಾಷಣದಲ್ಲಿ ಕೊನೆಗೂ ಒಂದೆರಡು ಪ್ಯಾರಾಗಳು ಉಳಿದೇ ಹೋಗುತ್ತಿತ್ತು. ಕೊನೆಗೆ ಎಲ್ಲಾ ಮುಗಿದ ನಂತರ ಜೋರಾಗಿ "ಜೈ ಹಿಂದ್" ಎಂದರೆ ಈ ಭಾಷಣಕ್ಕೆ ಮುಕ್ತಾಯ... ಸ್ಟೇಜ್ ನಿಂದ ಕೆಳಗಿಳಿದ ಮೇಲೆ ಸ್ನೇಹಿತರು "ತುಂಬಾ ಚೆನ್ನಾಗಿತ್ತೋ ಮಾರಾಯಾ, ಬಹಳ ಚೆನ್ನಾಗಿ ಮಾತಾಡಿದಿ..." ಎಂದರೆ ಯುದ್ಧ ಗೆದ್ದು ಬಂದ ಸಂಭ್ರಮ.

ಶಾಲೆಯ ಸುತ್ತಲಿನ ಪರಿಸರ

ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಅವರ ಅಣ್ಣನೋ, ಅಕ್ಕನೋ ಭಾಷಣವನ್ನು ಬರೆದುಕೊಟ್ಟಿರುತ್ತಾರೆ ಅಲ್ಲದೇ ಅವರೂ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದರಿಂದ ಎಲ್ಲರ ಮಾತುಗಳು ಒಂದೇ ರೀತಿಯಾಗಿರುತ್ತವೆ. ಆದರೂ ದೇವರ ದಯೆಯಿಂದ ಎಲ್ಲರ ಭಾಷಣಗಳನ್ನು ತಾಳ್ಮೆಯಿಂದ ಕೇಳುತ್ತಿದ್ದೆವು (ಇಲ್ಲದಿದ್ದರೆ ಅಧ್ಯಾಪಕರ ಏಟು ತಿನ್ನಬೇಕು) ಎಲ್ಲ ಮಕ್ಕಳ ಭಾಷಣಗಳೂ ಮುಗಿದನಂತರ ಸಭಾಧ್ಯಕ್ಷರ ಮಾತುಗಳು..

ತದನಂತರ ರಾಷ್ಟ್ರ ಗೀತೆ ಹಾಡಿ ಮನೆಗೆ ಹೊರಟೆವೆಂದರೆ ಆ ವರ್ಷದ ರಾಷ್ಟ್ರೀಯ ದಿನಾಚರಣೆ ಮುಗಿದಂತೆ...

"ಇಷ್ಟು ಹೇಳಿ ನನ್ನ ಓಂದೆರಡು ಮಾತುಗಳನ್ನು ಮುಗಿಸುತ್ತಿದ್ದೇನೆ......."


Tuesday, January 12, 2010

ಕನಸು

ಮುಂಜಾವಿನ ಹೊತ್ತದು
ಸೂರ್ಯ ಇನ್ನೂ ಮೂಡಿರಲಿಲ್ಲ
ಇಬ್ಬನಿಯ ತಂಪು ಗಾಳಿ ಬೀಸುತ್ತಿತ್ತು
ದೂರದಲ್ಲೊಂದು ಹಕ್ಕಿ ಕೂಗಿದ ಸದ್ದು

ಚಳಿಯೆಂದು ಇನ್ನೂ ಬೆಚ್ಚನೆ ಮಲಗಿದ್ದೆ
ಗುಬ್ಬಿಯಂತೆ ನನ್ನ ಪುಟ್ಟ ಮನೆಯಲ್ಲಿ
ಆಗ ಮೂಡಿತು ಒಂದು ಸುಂದರ ಕನಸು
ಗಂಧರ್ವ ಲೋಕಕ್ಕೆ ದಾರಿ ಕಂಡಂತೆ

ನಾನು ಹಾರಿ ಹೋಗುತ್ತಿದ್ದೆ ಮೋಡಗಳಾಚೆ
ಒಮ್ಮೆ ಮೇಲಕ್ಕೆ, ಬಲಕ್ಕೆ, ಎಡಕ್ಕೆ ಮತ್ತೆ ಜೀಕಿ ಕೆಳಕ್ಕೆ
ಹಿಡಿಯುವವರಿರಲಿಲ್ಲ ನನ್ನನ್ನ್ನು ಯಾರೂ
ಹಂಸ ರಾಜನೇ ನಾನೆಂಬಂತೆ ಹಾರುತ್ತಿದ್ದೆ

ಆಗ ಅಲ್ಲೊಂದು ಕಂಡಿತು ಸ್ವರ್ಣ ದ್ವಾರ
ಲೋಕದ ಸಕಲ ಸೌಂದರ್ಯವೂ
ಈ ಬಾಗಿಲ ಹಿಂದೆ ಮರೆಯಾದಂತೆ ಕಾಣುತ್ತಿತ್ತು
ಮೆಲ್ಲನೆ ಬಾಗಿಲ ಸರಿಸಿ ನೋಡಿದೆ

ಸುಂದರ ಲೋಕವೊಂದು ಅಲ್ಲಿ ಸೆರೆಯಾಗಿತ್ತು
ಸುವಾಸಿತ ಫಲ ಪುಷ್ಪಗಳಿಂದ ಸಜ್ಜುಗೊಂಡಿತ್ತು
ಅದೇನೋ ಅವರ್ಣನೀಯ ಆನಂದ ಎಲ್ಲೆಡೆ ಪಸರಿಸಿದಂತೆ
ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಿದ್ದವು


ಆಗ ನನಗೊಂದು ಸುಂದರ ದೃಶ್ಯ ಕಂಡಿತು
ಒಂದು ಮಗು ನನ್ನನ್ನು ಕೈ ಬೀಸಿ ಕರೆಯುತ್ತಿತ್ತು
ನನ್ನನ್ನೇ ಬಹಳ ಸಮಯದಿಂದ ಕಾದು ಕುಳಿತಂತೆ
ನಾನೂ ಕೂಡಾ ಕೈ ಚಾಚಿ ಮುನ್ನಡೆದೆ

ಇನ್ನೇನು ಮಗುವನ್ನು ಸ್ಪರ್ಶಿಸುವಷ್ಟರಲ್ಲಿ
ಕಾರ್ಗತ್ತಲು ಮೂಡಿತು, ಗಾಳಿ ಬೀಸಿತು
ನಾನು ಭಯದಿಂದ ನಡಗುತ್ತಿದ್ದೆ, "ಇದೇನಾಗಿ ಹೋಯಿತು?"
ಅಷ್ಟರಲ್ಲಿ ಎಚ್ಚರವಾಗಿ ಅರಿವಾಯಿತು, ಒಹ್ ಇದು ಬರಿ "ಕನಸು"Friday, January 1, 2010

ಹೊಸ ವರುಷಕ್ಕೆ ಸ್ವಾಗತ ಕೋರುತ್ತಾ...

2010ನೇ ಇಸವಿ ಕಾಲು ಇಟ್ಟೇಬಿಟ್ಟಿತು...
ಕಳೆದು ಹೋದ ವರ್ಷದ ನೆನಪು ಇನ್ನೂ ಹಾಗೇ ಇದೆ
ಸಮಯ ಮುಂದೆ ಓಡುತ್ತಿದೆ
ಅದೇನೋ ಬಹಳ ಅವಸರದಲ್ಲಿರುವಂತೆ...

ಸುಂದರ, ಮಧುರ ನೆನಪುಗಳು ಕಾಡುತ್ತವೆ
ಮಳೆಯಲ್ಲಿ ನೆನೆದದ್ದು, ಕಾಡು ಬೀದಿಯಲ್ಲಿ ಓಡಿದ್ದು
ಬಾನಾಡಿಯಂತೆ ಹಾರಾಡುವ ಕನಸು ಕಂಡದ್ದು
ಎಲ್ಲೋ ಸ್ವಪ್ನ ಲೋಕದಲ್ಲಿದ್ದಂತೆ ಭಾಸವಾಗುತ್ತಿದೆ

ಮತ್ತೆ ಹೊಸ ಕನಸುಗಳ ಜೊತೆ
ಹೊಸ ಆಸೆ, ಭರವಸೆಗಳ ಹೊತ್ತು ತಂದಿದೆ
ನವಜೀವನೋತ್ಸಾಹದ ಜೊತೆ
ಹೊಸ ವರುಷ ಬಂದಿದೆ