Friday, April 30, 2010

ಯೋಧನಿಗೆ ನಮನ

ಹೆಜ್ಜೆ ಹೆಜ್ಜೆಯ ಹಾಕಿ ಮುಂದಕೆ

ದೂರ ದೂರಕೆ, ದೇಶದಂಚಿಗೆ

ಸಾಗುತಿರುವ ಓ ವೀರನೆ

ನಿನಗೆ ನನ್ನಯ ಕೋಟಿ ನಮನ

ಹಿಮದ ಬೆಟ್ಟದ ಚಳಿಯ ನಡುವೆ

ಬಿಸಿಲ ಬೇಗೆಯ ಮರಳುಗಾಡ ನಡುವೆ

ದೇಶ ಕಾಯುವ ವೀರ ಯೋಧನೆ

ನಿನಗೆ ನನ್ನಯ ಕೋಟಿ ನಮನ

ನೀಲ ಶರಧಿಯ ದೂರದಂಚಲಿ

ಉಕ್ಕಿ ಬರುವ ಅಲೆಗೆ ಜಗ್ಗದೆ

ಬೀಸು ಗಾಳಿಗೆ ಕುಗ್ಗದ ಯೋಧಗೆ

ನಿನಗೆ ನನ್ನಯ ಕೋಟಿ ನಮನ

ಆಗಸದಲಿ ಜೀಕಿ ಹಾರುತ

ಶತ್ರು ಪಡೆಗಳ ತರಿದು ಹಾಕುತ

ವೈರಿ ಪಡೆಗಳ ಮೆಟ್ಟಿ ನಿಂತ ವೀರನೆ

ನಿನಗೆ ನನ್ನಯ ಕೋಟಿ ನಮನ

Tuesday, April 20, 2010

ಮಳೆ

ಆ ಸಂಜೆ ನನಗಿನ್ನೂ ನೆನಪಿದೆ
ಮನೆಯಂಗಳದಿ ಕೂತಿದ್ದೆ ನಾ
ಮೌನವೇ ಹೆಪ್ಪುಗಟ್ಟಿದಂತೆ
ಜಗತ್ತೇ ಸ್ತಬ್ಧವಾದಂತಿತ್ತು

ಒಣಗಿ ಹೋದ ಗಿಡ ಮರಗಳು
ಬಿರುಕು ಬಿಟ್ಟ ಭೂಮಿ
ಬಾಯಾರಿ ಕಂಗೆಟ್ಟ ಮೃಗ ಪಕ್ಷಿಗಳು
ಒಂದು ಹನಿ ನೀರಿಗಾಗಿ ಹಾತೊರೆಯುತ್ತಿತ್ತು

ಅದೆಲ್ಲೋ ದೂರದಲ್ಲಿ ಕರಿ ಮೋಡದ ಛಾಯೆ
ಗುಡುಗು ಸಿಡಿಲಿನ ಸದ್ದು
ತಂಗಾಳಿ ಬೀಸಿ, ಪರಿಮಳವ ಸೂಸಿ
ಕಗ್ಗತ್ತಲು ಸುತ್ತಲೂ ಆವರಿಸುತ್ತಿತ್ತು

ಮೊದಲ ಮಳೆಯ ಹನಿ ಟಪ್ಪನೆ ಬಿತ್ತಾಗ
ಅದರ ಹಿಂದೆ ಮತ್ತೊಂದು ಮಗದೊಂದು
ವರ್ಷದ ಮೊದಲ ಮಳೆ ಸುರಿಯಲಾರಂಬಿಸಿತ್ತು
ಮಣ್ಣಿನ ಘಮ್ಮನೆಯ ಪರಿಮಳ ಸುತ್ತಲೂ ಹರಡಿತ್ತು.