Friday, December 25, 2009

ಚಳಿಗಾಲದ ಸಂಭ್ರಮದಲ್ಲಿ....

ಅಬ್ಬಬ್ಬಾ... ಅಂತೂ ಇಂತೂ ಚಳಿಗಾಲ ಪ್ರಾರಂಭ ಆಯ್ತಪ್ಪಾ.... ಎಲ್ಲಿ ಅಂತ ಕೇಳ್ತಾಇದ್ದೀರಾ... ಇಲ್ಲೇ ಸ್ವಾಮೀ.. ನಾನು ದೆಲ್ಲಿಯಲ್ಲಿ ಸದ್ಯಕ್ಕೆ ಝಂಡಾ ಉರಿರೋದ್ರಿಂದ ದೆಲ್ಲಿ ಚಳಿ ಬಗ್ಗೆನೇ ಬರಿತಾ ಇದ್ದೇನೆ...

ನಾನು ಇಲ್ಲಿಗೆ ಬಂದು ಒಂದುವರೆ ವರ್ಷ ಆಯ್ತು... ಎರಡು ಬೇಸಗೆ, ಎರಡು ಚಳಿಗಾಲನ ಕಳೆದದ್ದೂ ಆಯ್ತು... ಎನೇ ಹೇಳಿ ಇಲ್ಲಿನ ಚಳಿಯ ಖುಶಿನೇ ಬೇರೆ... ಎರಡೆರಡು ಶರ್ಟು, ಸ್ವೆಟರ್, ಜಾಕೆಟ್ ಇಷ್ಟನ್ನೂ ಹೊದ್ದುಕೊಂಡು ಮುಸುಕು ಹಾಕಿಕೊಂಡು ಮಲಗಿಕೊಂಡಾಗ ಸಿಗೋ ಖುಶಿನೇ ಬೇರೆ.... ಸ್ವರ್ಗಕ್ಕೆ ಮೂರೇ ಗೇಣು ಅಂತಾರಲ್ಲ ಅಷ್ಟು...

ದೆಲ್ಲಿಯಲ್ಲಿ ಚಳಿಗಾಲ ಶುರು ಆಗುತ್ತಿದ್ದಂತೆಯೆ ಜನಜೀವನದ ವ್ಯವಸ್ಥೆಯೇ ಬದಲಾಗುತ್ತದೆ... ಬೆಳಗ್ಗೆ 10 ಗಂಟೆ ಅದ್ರೂ ಸೂರ್ಯ ದೇವನ ದರ್ಶನ ಭಾಗ್ಯ ಲಭ್ಯವಾಗುವುದಿಲ್ಲ... ಸದಾ ಮಂಜು ಮುಸುಕಿಕೊಂಡೀರುವ ವಾತಾವರಣ... ಮಯ್ಯೆಲ್ಲ ಕಂಬಳಿ, ಸ್ವೆಟರ್ ಹೊದ್ದುಕೊಂಡು ಕೆಲಸಕ್ಕೆ ಹೋಗುವ ಜನ... ದಾರಿಯೇ ಕಾಣದಷ್ಟು ಮಂಜು... ಒಂಥರಾ ಮಜಾ ಇರುತ್ತೆ...

ನಾನು ನೈಟ್ ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದಂತೆಯೇ ಒಂದು ಕಪ್ ಟೀ ಮಾಡಿಕೊಂಡು ಬಾಲ್ಕನಿಯಲ್ಲಿ ಕೂತುಬಿಡುತ್ತೇನೆ.. (ಬಿಸಿ ಬಿಸಿ ಟೀ ಕುಡಿದ ಹಾಗೂ ಆಯ್ತು, ಬಿಸಿಲಿಗೆ ಮೈ ಕಾಯಿಸಿಕೊಂಡ ಹಾಗೂ ಆಯ್ತು).. ಈ ರೀತಿ ಕೂತಾಗ ನನ್ನ ಮನೆ ನೆನಪಾಗುತ್ತದೆ.. ಯಾಕೆಂದರೆ ನನ್ನ ಮನೆ ಇರುವುದು ಹಳ್ಳಿಯಲ್ಲಿ.. ಆಗ ಇನ್ನೂ ನಮ್ಮ ಮನೆಗೆ ಸೋಲಾರ್ ವಾಟರ್ ಹೀಟರ್ ಬಂದಿರಲಿಲ್ಲ... ಹಾಗಾಗಿ ಬೆಳಗ್ಗೆ ಅಪ್ಪ ಎದ್ದವರೇ ಬಚ್ಚಲು ಮನೆ ನೀರು ಕಾಯಿಸಲು ಒಲೆ ಹಚ್ಚುತ್ತಿದ್ದರು.. ನಾನೋ ಅಮ್ಮ ನಾಲ್ಕು ಸಲ ಎಬ್ಬಿಸಿದ ಮೇಲೆ ಎದ್ದು ಆ ಒಲೆಯ ಮುಂದೆ ಹೋಗಿ ಚಳಿ ಕಾಯಿಸುತ್ತಾ ಕೂರುತ್ತಿದ್ದೆ.. ಈ ಕಡೆ ಒಲೆ ಉರಿ ಕೂಡಾ ತಾಗಬಾರದು, ಸ್ವಲ್ಪ ಶಾಖ ಮಾತ್ರ ಮೈಗೆ ತಾಗಬೇಕು ಆ ಥರ.. ಇಲ್ಲಿ ನಾನು ಬಾಲ್ಕನಿಯಲ್ಲಿ ಕುಳಿತಾಗ ಅದೇ ನೆನಪಾಗುತ್ತದೆ..

ಈ ವರ್ಷ ಕಳೆದ ವರ್ಷದಷ್ಟು ಚಳಿ ಇಲ್ಲ... (ಚಳಿ ಶುರು ಆಗಿ ಇನ್ನೂ ಎರಡು ದಿನ ಆಗಿದೆ ಅಷ್ಟೆ..) ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ಚಳಿ ಬರಬಹುದು ಎಂದು ಆಶಿಸುತ್ತೇನೆ...

ಸರಿಯಪ್ಪಾ.. ಚಳಿಕಾಸಿದ್ದು ಆಯ್ತು.. ಇನ್ನು ಹೋಗಿ ಗುಬ್ಬಿ ಮರಿ ಥರ ಬೆಚ್ಚಗೆ ಮಲ್ಕೋಬೇಕು.. ಎದ್ದಮೇಲೆ ಇನ್ನೊಂದು ಬ್ಲಾಗ್ ಜೊತೆ ಸಿಗ್ತೀನಿ....

Friday, December 18, 2009

ನಾನು ಮೆಚ್ಚಿದ ಪುಸ್ತಕ...


ಕೆ.ಪಿ.ಪೂರ್ಣಚಂದ್ರ ತೇಜಸ್ವಿ

"ಅದ್ಭುತ" ಎಂಬ ಒಂದೇ ಶಬ್ದ ಸರಿಸಾಟಿಯಾಗುತ್ತದೆ ಈ ಪುಸ್ತಕಕ್ಕೆ.... ನಾನು ಇಲ್ಲಿ ಹೇಳ ಹೊರಟಿರುವುದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ "ಕರ್ವಾಲೋ" ಪುಸ್ತಕದ ಬಗ್ಗೆ. ಈ ಪುಸ್ತಕದಲ್ಲಿ ಬರುವ ಒಂದೊಂದು ಪಾತ್ರಗಳೂ ಬರೀ ಪಾತ್ರಗಳಾಗಿರದೇ ಜೀವಂತ ವ್ಯಕ್ತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ. ಸ್ವತಃ ತೇಜಸ್ವಿಯರೇ ಒಂದು ಪಾತ್ರವಾಗಿರುವ ಈ ಪುಸ್ತಕದಲ್ಲಿ; ಒಂದುತ್ತಾ ಹೋಗುತ್ತಿದ್ದಂತೆಯೇ ನಾವು ಕೂಡಾ "ಕರ್ವಾಲೋ" ಲೋಕದ ಒಂದು ಜೀವಂತ ಪಾತ್ರವಾಗಿಬಿಡುವುದರಲ್ಲಿ ಸಂಶಯವಿಲ್ಲ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಜೇನು ತರಲು "ಮೂಡಿಗೆರೆ ಜೇನು ಸೊಸೈಟಿ"ಗೆ ಹೋಗುವುದರಿಂದ ಪ್ರಾರಂಭವಾಗುತ್ತದೆ ಈ ಪುಸ್ತಕ. ಅಲ್ಲಿನ ಬೀ ಮ್ಯಾನ್ ಲಕ್ಷ್ಮಣ ಮತ್ತು ಅವನ ಸಹಾಯಕನ ಸಿನಿಮಾ ಲೋಕದ ಕಲ್ಪನೆಗಳು ನಿಜಕ್ಕೂ ಸುಂದರವಾಗಿ ಚಿತ್ರಿಸಲಾಗಿದೆ. ತನ್ನ ಭತ್ತದ ಗದ್ದೆಗೆ ಹುಳುವಿನ ಕಾಟ ಪ್ರಾರಂಭವಾಗಿದ್ದರಿಂದ ಅದರ ನಿವಾರಣೆಗೆ ತೇಜಸ್ವಿಯವರು ಪ್ರೊಫ಼ೆಸರ್ ಕರ್ವಾಲೋ ಅವರನ್ನು ಭೇಟಿಯಾಗಲು ಹೋಗುತ್ತಾರೆ. ತೇಜಸ್ವಿ ಮತ್ತು ಕರ್ವಾಲೋ ಅವರ ಭೇಟಿ ಒಂದು ಅಜ್ನಾತ ಲೋಕದ ಪ್ರಯಾಣಕ್ಕೆ ನಾಂದಿ ಮಾಡಿಕೊಡುತ್ತದೆ. ಪ್ರೊII ಕರ್ವಾಲೋ ಬಳಿ ಸಹಾಯಕನಾಗಿ ಕೆಲಸ ಮಾಡುವ ಮಂದಣ್ಣ ಲೇಖಕರ ಮನೆಯಾಳು ಕೂಡಾ ಹೌದು. ಕರ್ವಾಲೋ ಅವರಿಗೆ ಮಂದಣ್ಣ ಒಬ್ಬ ಸೃಷ್ಟಿಯ ಹಲವಾರು ರಹಸ್ಯಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂದಿರುವ ಒಬ್ಬ ವ್ಯಕ್ತಿಯಾದರೆ ಲೇಖಕರಿಗೆ ಅವನೊಬ್ಬ ಸಾಮಾನ್ಯ ಕೆಲಸದ ಆಳು. ಊರಿನವರಿಗೋ ಈ ಮಂದಣ್ಣನೆಂದರೆ ಯಾವ ಕೆಲಸಕ್ಕೂಬಾರದ ಹಳ್ಳೀ ಗಮಾರ. ಈ ರೀತಿಯಾಗಿ ಒಬ್ಬ ವ್ಯಕ್ತಿಯ ಹಲವಾರು ಮುಖಗಳ ಪರಿಚಯವೇ ಈ ಮಂದಣ್ಣ.

ತೇಜಸ್ವಿ ಮತ್ತು ಕರ್ವಾಲೋ ಅವರ ಮುಂದುವರಿದ ಈ ಸ್ನೇಹ ಸೃಷ್ಟಿಯ ಹಲವಾರು ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಿಮಯುಗಗಳು, ವಿಕಾಸವಾದ ಇತ್ಯಾದಿ ವಿಷಯಗಳ ಮೇಲಿನ ಚರ್ಚೆ ಒಂದು ವಿಸ್ಮಯ ಲೋಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅಲ್ಲದೇ ಊರಿನಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೇನು ಹುಳಗಳ ಧಾಳಿಯಾದಾಗ; ಅದು ಬ್ಯಾಂಡ್ ಡ್ರಂ ನಿಂದ ಹೊರಟ ಧ್ವನಿ ತರಂಗಗಳಿಂದ ಜೇನು ಕೆರಳಿ ಧಾಳಿ ಮಾಡಿದೆ ಎಂಬುದಾಗಿ ಕರ್ವಾಲೋ ಅವರು ವಿವರಿಸುತ್ತಾರೆ. ಇದು ಕೀಟ ಜಗತ್ತಿನ ವಿಸ್ಮಯವನ್ನು ಕೂಡಾ ನಮ್ಮ ಮುಂದೆ ಸಾದರ ಪಡಿಸುತ್ತದೆ.

ಮುಂದೆ ಬರುವುದು ಮಂದಣ್ಣನ ಮದುವೆ ದೃಶ್ಯ. ಇದು ಮಾತ್ರ ನೀವು ಓದಿಯೇ ಆನಂದಿಸಬೇಕು. ನಕ್ಕು ಸುಸ್ತಾಗಿಸುವ ಒಂದೊಂದು ಘಟನೆಗಳೂ ತೇಜಸ್ವಿ ಅವರ ಹಾಸ್ಯ ಪ್ರಜ್ನೆಗೆ ಉದಾಹರಣೆಯಾಗಿದೆ.

ನಂತರ ಪ್ರಾರಂಭವಾಗುತ್ತದೆ ಕರ್ವಾಲೋ ಜಗತ್ತಿನ ವಿಸ್ಮಯ ಲೋಕಕ್ಕೆ ಪ್ರಯಾಣ. ಒಂದು “ಹಾರುವ ಓತಿ” ಯ ಹುಡುಕಾಟದಲ್ಲಿ ಪ್ರೊII ಕರ್ವಾಲೋ, ತೇಜಸ್ವಿ, ಮಂದಣ್ಣ ಮತ್ತು ಕಿವಿ ಹೊರಡುತ್ತಾರೆ. ಈ ಕಿವಿ ಯಾರು ಎಂದು ಕೇಳುತ್ತಿದ್ದೀರಾ? ಇದು ಒಂದು ಬರಿ ನಾಯಿ ಎಂದರೆ ತಪ್ಪಾಗುತ್ತದೆ ಏಕೆಂದರೆ ಇದು ಬರಿ ನಾಯಿಯಲ್ಲ; ಒಂದು ಬುದ್ಧಿವಂತ ಪ್ರಾಣಿ ಎನ್ನಬಹುದು.

ಎತ್ತಿನ ಗಾಡಿಯಲ್ಲಿ ಸಾಗುವ ಇವರ ಪ್ರಯಾಣದೊಂದಿಗೆ ನಾವೂಕೂಡಾ ಒಬ್ಬ ಪ್ರಯಾಣಿಕರಾಗುವುದರಲ್ಲಿ ಸಂಶಯವಿಲ್ಲ. ಈಚಲು ಬಯಲಿನ ನಡುವೆ ಸಾಗುವ ಇವರ ಪ್ರಯಾಣ ದಟ್ಟ ಕಾನನದಂಚಿನ ವರೆಗೂ ಕುತೂಹಲಗಳ ಗೂಡಾಗಿದೆ. ಸೂರ್ಯ ರಶ್ಮಿಯೂ ಬೀಳದ ದಟ್ಟ ಕಾಡಿನೊಳಗೆ ಒಂದು ಹಾರುವ ಹಲ್ಲಿಯನ್ನು ಹುಡುಕುವುದೆಂದರೆ ಹುಲ್ಲಿನ ಮೂಟೆಯಲ್ಲಿ ಗುಂಡು ಸೂಜಿಯನ್ನು ಹುಡುಕಿದಂತೆಯೇ ಸರಿ.

ಕಾಡಿನೊಳಗೆ ಪ್ರವೇಶಿಸಿದಂತೆಯೇ ಕಾಡುವ ನೀರವ ಮೌನ ಯಾಂತ್ರಿಕ ಬದುಕಿನಿಂದ ದೂರಕ್ಕೆ ಕೊಂಡೊಯ್ಯುವಂತೆ ಭಾಸವಾಗುವ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ. ಈ ರೀತಿ ಹಲವಾರು ಪ್ರಯತ್ನದೊಂದಿಗೆ, ಹುಡುಕಾಟದ ನಂತರ ಕೊನೆಗೂ ಪ್ರತ್ಯಕ್ಷವಾಗುತ್ತದೆ “ಹಾರುವ ಹಲ್ಲಿ” ಅದೇನು ಕೈಗೆಟಕುವಷ್ಟು ದೂರದಲ್ಲಿದೆಯೇ? ಅದೂ ಇಲ್ಲ... ಮರದ ತುದಿಯಲ್ಲಿ ಕುಳಿತಿರುವ ಹಲ್ಲಿಯ ಬಗ್ಗೆ ತೇಜಸ್ವಿಯವರು ಕರ್ವಾಲೋ ಅವರಿಗೆ ವಿವರಿಸುತ್ತಾ ಹೋಗುತ್ತಿದಂತೆಯೇ ನಮ್ಮ ಮುಂದೊಂದು ಚಿತ್ರ ಮೂಡುತ್ತದೆ. ಹಲ್ಲಿಯನ್ನು ಹಿಡಿಯಲು ಶತ ಪ್ರಯತ್ನ ಮಾಡುವ ತೇಜಸ್ವಿ ತಂಡ ಇನ್ನೇನು ಅದನ್ನು ಹಿಡಿದರು ಎನ್ನುತ್ತಿದ್ದಂತೆಯೇ ಹಲ್ಲಿ ಹಾರಿ ದೂರದ ಕಾಡಿನಲ್ಲಿ ಮರೆಯಾಗುತ್ತದೆ.

ಆದರೆ ಒಂದು ಯಕೃಶ್ಚಿತ್ ಹಲ್ಲಿಯನ್ನು ಹಿಡಿಯಲು ಇಷ್ಟೆಲ್ಲಾ ಯಾಕೆ ಕಷ್ಟ ಪಡುತ್ತಾರೆಂದುಕೊಂಡಿರಾ? ಕಾರಣ ಇಷ್ಟೆ; ಈ ಹಾರುವ ಹಲ್ಲಿ ಕೋಟ್ಯಾಂತರ ವರ್ಷಗಳಿಂದ ಯಾವ ಮಾರ್ಪಾಡು, ವಿಕಾಸವಾದಕ್ಕೆ ಒಳಗಾಗದೆ ತನ್ನ ಮೂಲ ರೂಪವನ್ನುಳಿಸಿಕೊಂಡಿರುವ ಒಂದು ಅದ್ಭುತ ಜೀವಿ. ಹಾಗಾಗಿ ಈ ಪ್ರಯಾಣ ಸೃಷ್ಟಿಯ ವಿಕಾಸವಾದ, ಬದಲಾವಣೆ ಇತ್ಯಾದಿಗಳ ಬಗ್ಗೆ ಒಂದು ಬೃಹತ್ ಪ್ರಶ್ನೆಯನ್ನು ನಮ್ಮ ಮುಂದಿರಿಸುತ್ತದೆ.

ತೇಜಸ್ವಿಯವರ ಈ ಪುಸ್ತಕ ನಿಮ್ಮ ಮನಸ್ಸನ್ನು ಸೃಷ್ಟಿಯ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ......


Thursday, December 17, 2009

ನನ್ನ ಅಜ್ಜಿ ಮನೆ ನೆನಪುಗಳು...


ನನ್ನ ಅಜ್ಜಿ ಮನೆ "ಹಾಳುವಂಟೊ"

ಏನಪ್ಪಾ.. 5ನೇ ಕ್ಲಾಸಿನ ಮಕ್ಕಳಿಗೆ ಕೊಡುವ ಪ್ರಬಂಧದಂತಿತೆ ತಲೆ ಬರಹ ಅಂದುಕೊಂಡಿರಾ....? ಹಾಗೆನಿಲ್ಲಾ, ನನ್ನ ಬಾಲ್ಯದ ಮಧುರ ನೆನಪುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ....
ನನ್ನ ಅಜ್ಜಿಮನೆ ಇರುವುದು ಧರ್ಮಸ್ಥಳದಿಂದ 20Km ದೂರದಲ್ಲಿ ಶಿಶಿಲ ಎಂಬ ಊರಿನಲ್ಲಿ... ದರ್ಭೆತಡ್ಕ ಕಾಲಕಾಮ ಪರಶುರಾಮ ದೇವಸ್ಥಾನದಿಂದ 1 Km ದೂರದಲ್ಲಿದೆ ನನ್ನ ಅಜ್ಜಿ ಮನೆ..
ಶಾಲೆಯ ವಾರ್ಷಿಕ ರಜೆ ಸಿಕ್ಕಿದ ಕೂಡಲೇ ಮೊದಲು ಓಡುತ್ತಿದ್ದುದು ಅಲ್ಲಿಗೇ.. (ಎಲ್ಲಾ ಮಕ್ಕಳೂ ಅದೇ ಮಾಡುವುದು ಬಿಡಿ, ಆದರೆ ಇಂದಿನ ಮಕ್ಕಳು summer camp ಗಳಿಗೆ ಹೋಗುತ್ತಾರೆ). ಹಾಗಾಗಿ ನಮಗೆಲ್ಲಾ ಅದೇ summer camp ಆಗಿತ್ತು... ನಾವು ಒಟ್ಟು 16 ಜನ ಮೊಮ್ಮಕ್ಕಳು; ಅದರಲ್ಲಿ 10 ಜನ ಸೇರಿದರೂ ಮಜಾ ಮಾಡಲು ಏನೂ ತೊಂದರೆ ಇರುತ್ತಿರಲಿಲ್ಲ...
ಸುತ್ತ ಹಸಿರು ತೋಟ, ಪಕ್ಕದಲ್ಲೇ ಹರಿಯುವ ನದಿ, ತಿರುಗಾಡಲು ಗುಡ್ಡ ಬೆಟ್ಟ, ನಡುವೆ ಅಜ್ಜಿ ಪ್ರೀತಿಯಿಂದ ಕೊಡುತ್ತಿದ್ದ ತಿಂಡಿಗಳು. ಕಥೆಗಳಲ್ಲಿ ಬರುವ ಕಿನ್ನರ ಲೋಕ ಎಂದರೆ ಅದೇ ಇರಬೇಕು.
ನಮ್ಮ ದಿನಚರಿ ಪ್ರಾರಂಭ ವಾಗುತ್ತಿದ್ದುದು ಬೆಳಗ್ಗಿನ ಸೂರ್ಯ ರಶ್ಮಿ ನಮ್ಮ ಬೆನ್ನ ಮೇಲೆ ಬಿದ್ದ ಮೇಲೆಯೆ. ಭೆಳಗ್ಗೆ ಎದ್ದು ಮುಖ ತೊಳೆದ ಕೂಡಲೆ ಸಿಗುತ್ತಿತು ಬಿಸಿ ಬಿಸಿ ಕಾಪಿ... 5-6 ಜನ ಮಕ್ಕಳು ಸೇರಿ ಅಡುಗೆ ಮನೆಯಲ್ಲಿ ದಾಂಧಲೆ ಎಬ್ಬಿಸುತ್ತಿದ್ದರೆ ಅಜ್ಜಿಗೋ ನಮ್ಮನ್ನು ಸುಮ್ಮನಿರಿಸುವುದೇ ಕೆಲಸ. ಇದಾದ ಕೂಡಲೇ ಅಂಗಳದಲ್ಲಿ ಬೆಳಗ್ಗಿನ ಕ್ರಿಕೆಟ್ ಪ್ರಾರಂಭ. ಚೆಂಡು ಮನೆಯೊಳಗೆ ಬಂದ ಕೂಡಲೇ ಮಾವ ನಮ್ಮನ್ನು ಬೈದು ಹೂವು ಕೊಯ್ಯಲು, ಗೇರು ಬೀಜ ಕೊಯ್ಯಲು ಅಟ್ಟುತ್ತಿದ್ದರು; ಸರಿ ನಮ್ಮ ಮಕ್ಕಳ ಸೈನ್ಯ ಯಾವ ಕೆಲಸಕ್ಕೂ ರೆಡಿ ಇರುತ್ತಿತ್ತು.. (ಇದರ ಹಿಂದೆ ಒಂದು ಕಾರಣ ಇದೆ) ಗುಡ್ಡೆಗೆ ಹೋಗಿ ಗೇರು ಬೀಜ ಹೆಕ್ಕಿ ಮನೆಗೆ ಬರುತ್ತಿದ್ದಂತೆಯೇ ತಿಂಡಿ ತಯ್ಯಾರಿರುತ್ತಿತ್ತು....

ಅಜ್ಜಿ ಮನೆಯ ಸಾಂಪ್ರದಾಯಿಕ ಅಡುಗೆ ಮನೆ

ಸರಿ ಮತ್ತೆ ಅಡುಗೆ ಮನೆಯಲ್ಲಿ ದಾಂಧಲೆಯೊಂದಿಗೆ ಉಪಾಹಾರ ಕರ್ಯಕ್ರಮ ಮುಗಿದ ಕೂಡಲೇ ನಮ್ಮ ದಿನದ ಕಾರ್ಯಕ್ರಮಗಳ ಪಟ್ಟಿ ತಯಾರಾಗುತ್ತಿತ್ತು. ಇವತ್ತು ಯಾವ ಆಟ ಆಡಬೇಕು, ಯಾವ ಕಡೆ ತಿರುಗಾಟ ಇತ್ಯಾದಿ..
10 ಘಂಟೆಯಾದ ಕೂಡಲೇ ನದಿಗೆ ಈಜಲು ಹೋಗಲು ಮನಸ್ಸು ಕಾತರಿಸುತ್ತಿತ್ತು; ಆದರೆ ಇದಕ್ಕೆ ಮಾವನ ಅನುಮತಿ ಅತ್ಯಗತ್ಯವಾದ್ದರಿಂದ ಅನುಮತಿ ಕೇಳಲು ನಮ್ಮಲ್ಲೊಬ್ಬರನ್ನು ಆಸೆ ತೋರಿಸಿ, ಹುರಿದುಂಬಿಸಿ ಕಳುಹಿಸಿ, ಅನುಮತಿ ಸಿಕ್ಕಿತೋ... ನದಿಯ ಕಡೆಗೆ ಒಂದೇ ಓಟ... (ಬೆಳಗ್ಗೆ ಮಾವ ಹೇಳುತ್ತಿದ್ದ ಎಲ್ಲಾ ಕೆಲಸಗಳನ್ನೂ ಚಾಚೂ ತಪ್ಪದೇ ಮಾಡುತ್ತಿದ್ದುದು ಇದೇ ಕಾರಣಕ್ಕಾಗಿ...)

ನಾವು ಈಜಾಡಲು ಹೋಗುತ್ತಿದ್ದ ನದಿ

ಇದರಲ್ಲಿ ಎರಡು ಪಂಗಡಗಳು, ಈಜು ಬರುವವರು ಮತ್ತು ಈಜು ಬಾರದವರು (ನಾನು ಈಜು ಬರದವರ ಪಂಗಡಕ್ಕೆ ಸೇರಿದವನಾಗಿದ್ದೆ). ಈಜು ಬರುವವರು ಆಳಕ್ಕಿಳಿದರೆ ನಾವು ಸೊಂಟದವರೆಗಿನ ನೀರಿನಲ್ಲಿಯೇ ಖುಶಿ ಪಡುತ್ತಿದ್ದೆವು. ಅಲ್ಲದರೂ ಸುಮ್ಮನೆ ಆಡುತ್ತಿದ್ದೆವೋ? ಅದೂ ಇಲ್ಲ... ದೊಡ್ಡ ಮಕ್ಕಳು ಏನಾದರೂ ಕೀಟಲೆ ಮಾಡಿ ಸಣ್ಣ ಮಕ್ಕಳನ್ನು ಅಳಿಸುವುದೇ ಕೆಲಸ.. ಈ ಮಧ್ಯ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ಮಧ್ಯಾನ್ಹ ಮಾವ ಬಂದು ಕರೆದ ಮೇಲೆಯೇ ನಾವು ನೀರಿನಿಂದ ಅಚೆ ಬರುತ್ತಿದ್ದುದು.

ಈ ತೋಟವೇ ನಮ್ಮ ಕ್ರಿಕೆಟ್ ಮೈದಾನ

ಮಧ್ಯಾನ್ಹದ ಊಟದ ನಂತರ ಮತ್ತೆ ಕ್ರಿಕೆಟ್ (ಈ ಬಾರಿ ತೋಟದಲ್ಲಿ ಯಾಕೆಂದರೆ ಅಂಗಳದಲ್ಲಿ ಅಡಿದರೆ ಮಲಗಿರುವವರಿಗೆ ತೊಂದರೆ). ಎಷ್ಟು ಹೊಡೆದರೂ ಅಡಕೆ ಮರಕ್ಕೆ ತಾಗುತ್ತಿದ್ದ ಚೆಂಡಿನ ಜೊತೆಗೆ ಸಾಗುತ್ತಿತ್ತು ನಮ್ಮ ಆಟ. ಸಂಜೆ ಮತ್ತೆ ಕಾಪಿ, ಸಾಯಂಕಾಲ ಮನೆ ಒಳಗೇ ಆಡಬೇಕೆಂಬ ಕಟ್ಟಪ್ಪಣೆಯೊಂದಿಗೆ ನಡೆಯುತ್ತಿತ್ತು ನಮ್ಮ ಗೌಜಿ ಗದ್ದಲ. ರಾತ್ರಿ ಊಟದ ನಂತರ ಅಜ್ಜಿಯ ಕಥೆ ಕೇಳುತ್ತಾ ಮಲಗಿದರೆ ನಿದ್ದೆ ಬಂದದ್ದೇ ತಿಳಿಯುತ್ತಿರಲಿಲ್ಲ......
ಇದೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ; ಇವತ್ತಿನ ಮಕ್ಕಳಿಗೆ ಆ ಖುಶಿ, ಸಂತೋಷ ಖಂಡಿತಾ ಸಿಗಲು ಸಾಧ್ಯವಿಲ್ಲ. ಬರಿ ಹಣ ಕೀಳುವ summer camp ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪ್ರಕೃತಿಯ ಅನಾವರಣ ಹೇಗೆ ಸಾಧ್ಯ? ಅಲ್ಲದೇ tution , music class, dance class ಗಳ ನಡುವೆ ಇಂದಿನ ಮಕ್ಕಳು ಕೌಟುಂಬಿಕ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಯಾತ್ರಿಕ ಬದುಕು ನಾಳಿನ ಪೀಳಿಗೆಯನ್ನು ಬರೀ ಹಣ ಗಳಿಸುವ ಯಂತ್ರವಾಗಿಸುತ್ತಿದೆ ಅಲ್ಲವೇ?

ಮುಸ್ಸಂಜೆ...

ಮುಸ್ಸಂಜೆಯ ತಿಳಿ ಬಾನಲಿ
ತಂಗಾಳಿ ಬೀಸಿದೆ
ಶಶಿ ಮೂಡುವ ಸಮಯವಿದು
ಸಂತೋಷ ತಂದಿದೆ

ಹಕ್ಕಿ ಹಾರಿದೆ, ರೆಕ್ಕೆ ಬೀಸುತ
ತನ್ನ ಹಿಂಡ ಜೊತೆಗೆ
ನೀಲಿ ಮುಗಿಲಿನ ಗಗನದಂಚಲಿ
ತನ್ನ ಮನೆಯ ಕಡೆಗೆ

ಚುಕ್ಕಿ ಮೂಡಿದೆ ಕತ್ತಲಾಗಿಡೆ
ಕೂಗುತಿದೆ ದೂರದಲ್ಲಿ ಹಕ್ಕಿ
ಭಾವ ಜೀವವು ಉಲ್ಲಾಸಗೊಂಡಿದೆ
ಮನದಾಳದ ಕನಸೆಂಬ "ಮುತ್ತು" ಹೆಕ್ಕಿ

ಪ್ರಕೃತಿ ಸೌಂದರ್ಯ...

ಕಳೆದ octoberನಲ್ಲಿ ವೈಶ್ನೋದೇವಿ (ಜಮ್ಮು) ಗೆ ಹೋದಾದ ತೆಗೆದ ಫೊಟೊಗಳನ್ನು ಇಲ್ಲಿ ಹಾಕುತಿದ್ದೇನೆ..
ಅಲ್ಲಿ ನಾನು ಕಂಡ ಪ್ರಕೃತಿ ಸೌಂದರ್ಯ ವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲುದರಿಂದ ಚಿತ್ರಗಳ ಮೂಲಕ ತೋರಿಸುತಿದ್ದೇನೆ...