Tuesday, June 8, 2010

ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ...

ನಾನು ಈಗ ಬರೆಯ ಹೊರಟಿರುವುದು ಮೇಲಿನ ಶೀರ್ಷಿಕೆಯ ಪುಸ್ತಕದ ಬಗ್ಗೆಯೆ... "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಈ ಪುಸ್ತಕ ನಾನು ಮೆಚ್ಚಿಕೊಂಡ ಕೃತಿಗಳಲ್ಲೊಂದು. ಭಾರತದ ಅಗಾಧ ಮಹಿಮೆ, ಹಿಮಾಲಯದಲ್ಲಿ ವಾಸಿಸುವ ಅಜ್ನಾತ ಸಾಧು ಸಂತರು, ಅವರ ಸಾಧನೆ, ಜೀವನದ ಮೇಲೆ ಬೆಳಕು ಚೆಲ್ಲುವ ಈ ಪುಸ್ತಕ ನಿಜವಾಗಿಯೂ ಕುತೂಹಲಕರವಾಗಿರುವುದಷ್ಟೇ ಅಲ್ಲ, ಪ್ರಾಚೀನ ಭಾರತದ ಆಧ್ಯಾತ್ಮ ಜೀವನದ ಮಹತ್ವವನ್ನೂ ನಮಗೆ ಮಾಡಿಕೊಡುತ್ತದೆ. ನಾನು ಇಲ್ಲಿ ಈ ಪುಸ್ತಕದ ಬಗ್ಗೆ ಯಾವುದೇ ವಿಮರ್ಷೆಯಾಗಲೀ, ಟಿಪ್ಪಣಿಯಾಗಲೀ ಬರೆಯುತ್ತಿಲ್ಲ, ಕೇವಲ ನನ್ನ ಅನಿಸಿಕೆಗಳನ್ನು ಬರೆಯುವ ಪ್ರಯತ್ನ.

ಮೂಲತಃ ಇದು ಆಂಗ್ಲ ಭಾಷೆಯಲ್ಲಿ ಸ್ವಾಮಿ ರಾಮರವರು ತಮ್ಮ ಅಧ್ಯಾತ್ಮಿಕ ಅನಿಭವಗಳ "Living with the Himalayan masters" ಎಂಬ ಕೃತಿಯಾಗಿದ್ದು ಇದನ್ನು ಡಿ. ಕೆ. ಶ್ಯಾಮಸುಂದರ ರಾವ್ ಅವರು ಬಹಳ ಸರಳ ಸುಂದರ ಕನ್ನಡ ಭಾಷೆಯಲ್ಲಿ ಅನುವಾದಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟು 14 ಅಧ್ಯಾಯಗಳಿದ್ದು ಅದರಲ್ಲಿ ಉಪ ಅಧ್ಯಾಯಗಳಿವೆ. ಈ ಪ್ರತಿ ಅಧ್ಯಾಯಗಳೂ ಕೂಡಾ ಸ್ವಾಮಿ ರಾಮ ಅವರ ಅಧ್ಯಾತ್ಮ ಜೀವನದ ಒಂದೊಂದು ಮಜಲಿನ ಕಥೆಯನ್ನು ವಿವರಿಸುತ್ತವೆ.

ಸ್ವಾಮಿ ರಾಮರು ಬಾಲ್ಯದಲ್ಲಿರುವಾಗ ಅವರ ಗುರುಗಳು ಅವರನ್ನು ಅಧ್ಯಾತ್ಮ ಜೀವನಕ್ಕಾಗಿ ಅವರನ್ನು ತಮ್ಮ ಹಿಮಾಲಯದ ಗಮ್ಯ ಸ್ಥಾನಕ್ಕೆ ಕರೆದುಕೊಂದು ಹೋಗುವುದರಿಂದ ಪ್ರಾರಂಭ ವಾಗುವ ಜೀವನ ಮುಂದಿನ ಪುಟಗಳಲ್ಲಿ ಹಲವಾರು ಕೌತುಕ, ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅವರ ಬಾಲ್ಯದ ಜೀವನ ಬಹಳ ಸುಂದರವಾಗಿತ್ತು ಎಂದು ರಾಮರು ಹೇಳುತ್ತಾರೆ. ಆ ಅಗಮ್ಯ ಹಿಮಾಲಯದ ಸೌಂದರ್ಯದ ವರ್ಣನೆ ಇಲ್ಲಿ ಪದಗಳಲ್ಲಿ ವಿವರಿಸುವುದಂತೂ ಅಸಾಧ್ಯ. ಆ ಮುಗಿಲೆತ್ತರದ ಶಿಖರಗಳು, ಪುಷ್ಪ ಕಣಿವೆಗಳು, ಇತ್ಯಾದಿ... ಅವರ ಗುರುಗಳು ಅವರನ್ನು ಯಾವತ್ತೂ ಬಯ್ಯಲಿಲ್ಲ, ಹೊಡೆಯಲಿಲ್ಲ, ಬಹಳ ಆತ್ಮೀಯವಾಗಿ ಪ್ರ‍ೀತಿಯಿಂದ ನೋಡಿಕೊಳ್ಳುತ್ತಿದ್ದರು. ಪ್ರಕೃತಿಯ ಜೊತೆಯ ಸಹಬಾಳ್ವೆಯ ಜೀವನದ ಪಾಠ ಇವರಿಗೆ ಆಗುತ್ತದೆ.

ಮುಂದಿನ ಅವರ ಕೌಮಾರ್ಯ ಮತ್ತು ಯವ್ವನದ ಜೀವನದಲ್ಲಿ ಆಧ್ಯಾತ್ಮ ಜೀವನದ ನಿಜವಾದ ಪಾಠಗಳು ಇವರಿಗೆ ಆಗುತ್ತದೆ. ಇಲ್ಲಿ ಇವರು ಹಲವಾರು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯ ಮನುಷ್ಯನ ಜೀವನಕ್ಕೂ ಹಿಮಾಲಯದ ಕಠಿಣ ಪರಿಸ್ಥಿತಿಯಲ್ಲಿದ್ದುಕೊಂಡು ಸಾಧನೆ ಮಾಡುವುದು ಎಷ್ಟು ಕಷ್ಟವಿದೆ ಎಂಬುದು ನಮಗೆ ಅರಿವಾಗುತ್ತದೆ. ಈ ಎಲ್ಲಾ ಅವರ ಪರಿಸ್ಥಿತಿಯನ್ನು ನಿಮಗೆ ಇಲ್ಲಿ ನಾನು ಬರೆದು ವಿವರಿಸಲು ಸಾಧ್ಯವಿಲ್ಲ ಅದನ್ನು ನೀವು ಪುಸ್ತಕ ಓದಿಯೇ ಆನಂದಿಸಬೇಕು.

ಅಲ್ಲದೇ ಈ ಪುಸ್ತಕದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳನ್ನು ವಿವರಿಸಿದ್ದಾರೆ. ನಾವು ಹಿಮಾಲಯದ ಸಾಧುಗಳ ಅದ್ಭುತ ಶಕ್ತಿಗಳ ಬಗ್ಗೆ ಕೇಳಿರುತ್ತೇವೆ. ಇದರ ಕುರಿತಾದ ಹಲವಾರು ಘಟನೆಗಳನ್ನೂ ನಾವು ಈ ಪುಸ್ತಕದಲ್ಲಿ ನೋಡಬಹುದು.

ಒಟ್ಟಿನಲ್ಲಿ ಈ ಪುಸ್ತಕ ಒಂದು ಕುತೂಹಲಗಳ ಆಗರವಾಗಿದೆ. ಅಲ್ಲದೇ ಹಿಮಾಲಯದ ಮಹಾತ್ಮರ ಆಧ್ಯಾತ್ಮ ಜೀವನದ ಒಂದು ಪಕ್ಷಿನೋಟವನ್ನು ನಮಗೆ ನೀಡುತ್ತದೆ. ಒಟ್ಟಿನಲ್ಲಿ ನೀವು ಖಂಡಿತವಾಗಿ ಓದಲೇ ಬೇಕಾದ ಪುಸ್ತಕ ಇದು.