Thursday, March 4, 2010

ಬೇಲಿ

ಭಾರತ ಮತ್ತು ಪಾಕಿಸ್ತಾನದ ಮಧ್ಯದಲ್ಲಿರುವ ಬೇಲಿ. ಎಡಗಡೆ ಪಾಕಿಸ್ತಾನ, ಬಲಗಡೆ ಭಾರತ


ಬೇಲಿ ಹಾಕಿರುವೆವು ನಾವು
ಒಂದೇ ನೆಲದ ನಡುವೆ
ಆ ಕಡೆ ನಿನಗೆ, ಈ ಕಡೆ ನನಗೆ
ದಟ್ಟ ಕಾವಲಿನ ನಡುವೆ

ಮರೆತು ಹೋಗಿರುವೆವು ನಾವು
ಒಂದೇ ತಾಯಿಯ ಮಕ್ಕಳೆಂದು
ಒಂದೇ ಮನೆಯ ಒಡೆದಿರುವೆವು
ಬೇಲಿ ಹಾಕಿರುವೆವು ನಾವು

ದ್ವೇಷ ಭಾವಗಳ ಜೊತೆಗೆ
ರಕ್ತ ಪಾತದ ನಡುವೆ
ಮೂಕ ಸಾಕ್ಷಿಯಾಗಿ
ನಿಂತಿಹುದು ಈ ಮುಳ್ಳಿನ ಬೇಲಿ

ಅಣ್ಣ ತಮ್ಮಂದಿರನ್ನು,
ಅಕ್ಕ ತಂಗಿಯರನ್ನು
ಬೇರ್ಪಡಿಸಿಹುದು
ಈ ಕಬ್ಬಿಣದ ತಂತಿಯ ಬೇಲಿ

ನಾವೇಕೆ ಹೀಗೆ?
ಎಂದೆಂದಿಗೂ ಹೀಗೇ ಬಾಳಬೇಕೆ?
ಅಸೂಯೆಯ ನೆರಳಿನಲ್ಲಿ
ಧರ್ಮ ಜಾತಿಯ ಒಡಕಿನಲ್ಲಿ

ಇಬ್ಬರ ರಕ್ತ ಕೆಂಪು ಅಲ್ಲವೇ?
ಇಬ್ಬರೂ ನಿಂತಿರುವುದೂ
ಒಂದೇ ನೆಲದ ಮೇಲಲ್ಲವೇ?
ಆದರೂ ಮಧ್ಯದಲ್ಲಿದೆ ಚುಚ್ಚುವ ಬೇಲಿ

ಮರೆಯೋಣ ಈ ದ್ವೇಷವ
ಹಂಚೋಣ ಸಹೋದರ ಭಾವವ
ಬೇಕಿಲ್ಲ ನಮಗೆ ಈ ರಕ್ತಪಾತ
ಒಂದಾಗಿ ಬಾಳೋಣ, ಚಿರಕಾಲ ಮೆರೆಯೋಣ.






Wednesday, March 3, 2010

ಮಜ್ಜಿಗೆ....

ಬಹಳ ದಿನಗಳ ನಂತರ ಬ್ಲಾಗ್ ಕಡೆ ತಲೆ ಹಾಕುತ್ತಿದ್ದೇನೆ..

ಈ ಘಟನೆ ನಡೆದದ್ದು ನಾನು ಮಣಿಪಾಲದಲ್ಲಿ ಡಿಪ್ಲೊಮಾ ಮಾಡುತ್ತಿದ್ದಾಗ. ಆಗ ನಾನು ಅಲ್ಲಿ ಪೇಯಿಂಗ್ ಗೆಸ್ಟ್ ಆಗಿ ಒಬ್ಬರ ಮನೆಯಲ್ಲಿದ್ದೆ. ಅಲ್ಲಿ ಭಾನುವಾರ ರಾತ್ರೆ ಊಟ ಇರುತ್ತಿರಲಿಲ್ಲ ಹಾಗಾಗಿ ನಾವು ಅಂದು ಹೊರಗೆ ಹೊಟೇಲಿಗೆ ತಿನ್ನಲು ಹೋಗುತ್ತಿದ್ದೆವು. ಹೀಗೆ ಒಂದು ಭಾನುವಾರ ಸಂಜೆ ಊಟಕ್ಕೆ ಹೊರಗೆ ಹೋಗಿದ್ದೆವು (ನನ್ನ ಜೊತೆ ಇನ್ನೂ 2-3 ಜನ ಗೆಳೆಯರಿದ್ದರು) ಹೋಟೆಲಿಗೆ ಹೋಗಿ ಊಟ ಮಾಡಿದ್ದಾಯಿತು ಕೊನೆಗೆ ಎಲ್ಲರೂ ಒಂದೊಂದು ಜ್ಯೂಸ್ ಹೇಳಿದ್ದಾಯಿತು.... ನಮ್ಮಲ್ಲೊಬ್ಬ ಮೆನು ನೋಡಿ "ನನಗೆ butter milk ಬೇಕು" ಎಂದ. ಸರಿ ಎಲ್ಲರಿಗೂ ಜ್ಯೂಸ್ ಬಂತು ಅವನಿಗೆ butter milk ಬಂತು. ಅವನು ಒಂದು ಗುಟುಕು ಕುಡಿದ ಕೂಡಲೇ " ಥೋ... ಇದು ಮಜ್ಜಿಗೆ ಮರಾಯಾ......!!!!!" ಎಂದ... ನಮಗೆಲ್ಲಾ ತಡೆಯಲಾಗದ ನಗು. ಅವನಿಗೆ butter milk ಅಂದರೆ ಮಜ್ಜಿಗೆ ಎನ್ನುವುದೇ ಗೊತ್ತಿರಲಿಲ್ಲ.. ಕೊನೆಯವರೆಗೂ ಅಂದರೆ ನಾನು ಆ pg ಬಿಡುವ ತನಕವೂ ಕೂಡಾ ಅವನಿಗೆ Butter milk ಎಂದು ಕರೆದು ತಮಾಷೆ ಮಾಡುತ್ತಿದ್ದೆವು.