Thursday, January 21, 2010

ನಾನು ಸಾಂಬಾರ್ ಮಾಡಿದ್ದು...

ಇಲ್ಲಿ (ಅಂದರೆ ದೆಲ್ಲಿಯಲ್ಲಿ) ನಾನು ಇರುವ ಪಕ್ಕದ flat ನಲ್ಲಿ ನನ್ನ ಥರಾನೇ 5 ಜನ ಕನ್ನಡಿಗರು ಇದ್ದಾರೆ.. ಅವರೂ ಬ್ಯಾಚುಲರ್ಸೇ.. ಹಾಗಾಗಿ ಟೈಮ್ ಪಾಸ್ ಗೆ ಅಂತ ಅಲ್ಲಿಗೆ ಹೋಗುತ್ತಾ ಇರುತ್ತೇನೆ. ಹೀಗೆ ಕಳೆದ ವಾರ ಹೋದಾಗ ಚಪಾತಿ ಮಾಡೋಣ ಅನ್ನುವ idea ಬಂತು. ಸರಿ ನಾನು ಮತ್ತು ವಾಮನ ಎಂಬ ಇಬ್ಬರು ಸೇರಿ ಹಿಟ್ಟು ಕಲಿಸಿದ್ದಾಯಿತು. ಈಗ ಚಪಾತಿ ಜೊತೆಗೆ ತಿನ್ನಲು ಏನಾದರು ಬೇಕಲ್ಲವೇ? ನಾನು ಆಲೂ ಮಟರ್ (ಆಲೂಗಡ್ಡೆ ಮತ್ತು ಹಸಿ ಬಟಾಣಿ ಸೇರಿಸಿ ಮಾಡುವ ಒಂದು ಬಗೆಯ ಸಾಂಬಾರ್) ಮಾಡುತ್ತೇನೆ, ಅದಕ್ಕೆ ನೀನು ಹೋಗಿ ಹಸಿ ಬಟಾಣಿ ತೆಗೆದುಕೊಂಡು ಬಾ ಎಂದು ಶೈಲೇಶ್ ಎಂಬವನನ್ನು ಕಳುಹಿಸಿದ್ದಾಯಿತು.

ಈ ಕಡೆ ಚಪಾತಿ ಲಟ್ಟಿಸುವ ಕಾರ್ಯಕ್ರಮ ಪ್ರಾರಂಭವಾಯಿತು. ಶೈಲೇಶನೋ ಬಟಾಣಿ ತರಲು ಹೋದವ ಪತ್ತೆ ಇಲ್ಲ.. ಫೊನ್ ಮಾಡಿ ಬೇಗ ಬಾ ಮಾರಾಯಾ ಎಂದು ಕರೆದೆ... ಉಳಿದ ಎಲ್ಲರೂ ಟಿವಿ ಯಲ್ಲಿ ಕ್ರಿಕೆಟ್ ನೋಡುವುದರಲ್ಲಿ ಮಘ್ನರಾಗಿದ್ದರು. ಬಟಾಣಿ ತರಲು ಹೋದ ಜನ ವಾಪಸು ಬಂದಮೇಲೆ ಚಪಾತಿ ಸುಡುವ ಜವಾಬ್ದಾರಿಯನ್ನು ಅವನಿಗೆ ವಹಿಸಿದ್ದಾಯಿತು.. ಚಪಾತಿಯೋ ರೋಟಿ, ನಾನ್ ಗಳ ರೂಪ ಪಡೆಯುತ್ತಿದ್ದವು. ಮಧ್ಯದಲ್ಲಿ ಕೆಲವು ಸರಿಯಾಗಿ ಬರುತಿದ್ದವು...

ನಾನು ಈ ಮಧ್ಯ ಸಾಂಬಾರ್ ಮಾಡುವ ತಯ್ಯಾರಿಯಲ್ಲಿ ತೊಡಗಿದೆ. ನಿಜ ಹೇಳ ಬೇಕೆಂದರೆ ನನಗೆ ಆಲೂಮಟರ್ ಮಾಡುವ ಸರಿಯಾದ ವಿಧಾನ ಗೊತ್ತಿರಲಿಲ್ಲ. ಗೊತ್ತಿದೆ ಎಂದು ಒಪ್ಪಿಕೊಂಡಾಗಿದೆ, ಹಿಂಜರಿಯುವಂತಿಲ್ಲ, ಮರ್ಯಾದೆ ಪ್ರಶ್ನೆ.. ಆಲೂಗಡ್ಡೆ ಕಟ್ ಮಾಡಿ, ಬಟಾಣಿ ಸುಲಿದು, ಇದ್ದ 2 ಟೊಮೆಟೋ ಹಣ್ಣನ್ನೂ ಕೊಚ್ಚಿ ಹಾಕಿ ಒಲೆಯ ಮೇಲೆ ಬೇಯಲು ಇಟ್ಟದ್ದಾಯಿತು. 10 ನಿಮಿಷ ಕಳೆಯಿತು, 15 ನಿಮಿಷ ಕಳೆಯಿತು.. ಆಲೂಗಡ್ಡೆ ಯಾಗಲೀ, ಬಟಾಣಿಯಾಗಲೀ ಬೇಯುವ ಯಾವ ಲಕ್ಷಣಗಳೂ ಕಾಣಲಿಲ್ಲ.. ಘಂಟೆ ಬೇರೆ 10 ಆಗುತ್ತಾ ಬಂದಿತ್ತು (ರಾತ್ರೆ) ಮತ್ತೇನು ಮಾಡುವುದು ಎಂದು ತಿಳಿಯದೇ ಸಂಪೂರ್ಣ ಮಿಶ್ರಣವನ್ನು ಕುಕ್ಕರ್ ಗೆ ವರ್ಗಾವಣೆ ಮಾಡಿ ಪುನಃ ಬೇಯಲು ಇಟ್ಟೆ..

ದೇವರ ದಯೆ ನನ್ನ ಮೇಲಿತ್ತು ಕಾಣುತ್ತದೆ. ಕುಕ್ಕರ್ 5-6 ಸೀಟಿ ಹೊಡೆದ ಮೇಲೆ ತೆರೆದು ನೋಡಿದಾಗ ತರಕಾರಿ ಬೆಂದಿತ್ತು. ಮತ್ತೆ ಇದನ್ನು ಬಾಣಲೆಗೆ ಹಾಕಿದಾಗ ನೀರು ಜಾಸ್ತಿಯಾದದ್ದು ಗೊತ್ತಾಯಿತು.. ಈಗ ಉಳಿದದ್ದು ಒಂದೇ ದಾರಿ.. ಇದನ್ನು ಸರಿಯಾಗಿ ಕುದಿಸಿಯೇ ನೀರನ್ನು ತೆಗೆಯಬೇಕಿತ್ತು. ಸ್ವಲ್ಪ MTR ಸಾಂಬಾರ್ powder ಮತ್ತು ಉಪ್ಪು ಹಾಕಿ ಕುದಿಯಲು ಬಿಟ್ಟೆ. 10 ನಿಮಿಷ ಬಿಟ್ಟು ನೋಡಿದಾಗ ನನ್ನ ಈ ಪ್ರಯೋಗ ಒಂದು ಹದಕ್ಕೆ ಬಂದಿತ್ತು. ಇಷ್ಟೆಲ್ಲಾ ಆಗುವಾಗ ಘಂಟೆ 10.30 ದಾಟಿದೆ... ಬೇಗನೆ ಊಟಕ್ಕೆ ಕೂತು ಆನ್ನ, ಚಪಾತಿ ಬಡಿಸಿಕೊಂಡು ನಾನು ಮಾಡಿದ ಈ ಹೊಸ ರುಚಿಯನ್ನೂ ಹಾಕಿಕೊಂಡು ಒಂದು ತುತ್ತು ಅನ್ನ ಬಾಯಿಗಿಟ್ಟೆ... .. ನಿಜವಾಗಿಯೂ ದೇವರ ದಯೆ; ಸಾಂಬಾರ್ ಮಾತ್ರ ಅದ್ಭುತ ರುಚಿಯಾಗಿತ್ತು. ಅದು ಹೇಗೆ ಆಯಿತು ಎಂಬುದು ಮಾತ್ರ ಚಿದಂಬರ ರಹಸ್ಯ. ಎಲ್ಲರ ಮುಖ ನೋಡಿದೆ ಚಪ್ಪರಿಸಿ ತಿನ್ನುತ್ತಿದ್ದಾರೆ. ಬದುಕಿದೆಯಾ ಬಡಜೀವವೆ ಅಂದುಕೊಂಡೆ. ಮತ್ತು ಆವತ್ತೇ deside ಮಾಡಿದೆ ಇನ್ನು ಮುಂದೆ ಇನ್ನೊಬ್ಬರ ಮನೆಗೆ ಹೋದಾಗ ಖಂಡಿತವಾಗಿಯೂ ಹೊಸ ರುಚಿಯ ಪ್ರಯೋಗಕ್ಕೆ ಮಾತ್ರ ಕೈ ಹಾಕುವುದಿಲ್ಲ...

2 comments:

  1. ಇನ್ನೊಬ್ಬರ ಮನೆ ಯಾಕೆ.. ನನ್ನ ಮನೆಯಲ್ಲೇ ನನ್ನ ಪ್ರಯೋಗ ನಡೆದು ಕೆಲವು ಸಲ ಪಾಸು.. ಕೆಲವುಸಲ ಫೈಲ್ ಆಗಿದ್ದೇನೆ..

    ReplyDelete
  2. hmmm.. adige prayoga poora challath sathi.... avval avval puda use hase..:)

    ReplyDelete