Saturday, January 16, 2010

ಸನ್ಮಾನ್ಯ ಸಭಾ ಅಧ್ಯಕ್ಷರೇ.......

ಶ್ರೀ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ, ಮಾಳ

"ಸನ್ಮಾನ್ಯ ಸಭಾ ಅಧ್ಯಕ್ಷರೇ, ಪೂಜ್ಯನೀಯ ಗುರುಗಳೇ ಹಾಗೂ ನನ್ನ ನೆಚ್ಚಿನ ಸಹಪಾಠಿಗಳೇ... ನಾನು ಇಂದು ಪ್ರಜಾಪ್ರಭುತ್ವ ದಿನಾಚರಣೆಯ ಬಗ್ಗೆ ಒಂದೆರಡು ಮಾತುಗಳನ್ನು ಆಡಲು ಇಚ್ಛಿಸುತ್ತೇನೆ............"

ಇದು ನಾನು ಪ್ರೈಮರಿ ಶಾಲಾ ದಿನಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯದಿನ, ಗಣರಾಜ್ಯೋತ್ಸವ ಇತ್ಯಾದಿ ಸಮಾರಂಭಗಳಲ್ಲಿ ಮಕ್ಕಳು ಮಾಡುತ್ತಿದ್ದ ಭಾಷಣದ ತುಣುಕುಗಳು... ನನಗೆ ಇದು ಯಾಕೆ ನೆನಪಿಗೆ ಬಂತೆಂದರೆ ಇನ್ನು ಕೆಲವೇ ದಿನಗಳಲ್ಲಿ ಜನವರಿ ಇಪ್ಪತ್ತಾರು ಬರಲಿದೆಯಲ್ಲವೇ..

ನಾನು ಓದಿದ್ದು ಹಳ್ಳಿ ಶಾಲೆಯಲ್ಲಿ.. ಅಲ್ಲದೆ ಆಗಿನ ದಿನಗಳು ಈಗಿನ ಮೋಡರ್ನ್ ಶಾಲಾದಿನಗಳಂತಿರಲಿಲ್ಲ.. ಮಧ್ಯಮ ಮತ್ತು ಬಡ ಕುಟುಂಬ ಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳಿಂದ ಕೂಡಿದ ಆ ದಿನಗಳು ನಿಜಕ್ಕೂ ಅವಿಸ್ಮರಣೀಯ...

ಯಾವುದೇ ರಾಷ್ಟ್ರೀಯ ಹಬ್ಬಗಳ ದಿನದ ಎರಡು ದಿನ ಮೊದಲೇ ನಮಗೆಲ್ಲಾ ಸಂಭ್ರಮ, ಸಡಗರ (ನಿಜವಾದ ಕಾರಣವೇನೆಂದರೆ, ಆವತ್ತು ರಜೆ, ಹಾಗೂ ಚಾಕೋಲೇಟ್ ಸಿಗುವುದರಿಂದ). ಸಮವಸ್ತ್ರವನ್ನು ನೀಟಾಗಿ ಒಗೆದು ಅದಕ್ಕೆ ಇಸ್ತ್ರಿ ಹಾಕಿ, ಅಲಮಾರಿಯ ಮೂಲೆಯಲ್ಲಿರುವ ಧ್ವಜವನ್ನು ತೆಗೆದು ಅದನ್ನು ಕಟ್ಟಲು ಪೈಪು ಅಥವಾ ಉದ್ದ ಕೋಲನ್ನೂ ತಯ್ಯಾರುಮಾಡುವ ಕಾರ್ಯಕ್ರಮ ವಿರುತ್ತಿತ್ತು.. (ನನ್ನಬಳಿ ಬಟ್ಟೆಯ ಧ್ವಜವಿದ್ದುದರಿಂದ ಅದನ್ನುಕಟ್ಟಲು ಕೋಲು ಬೇಕಾಗುತ್ತಿತ್ತು.)

ಬೆಳಗ್ಗೆ ಸ್ವಲ್ಪ ಬೇಗನೇ ಎದ್ದು ಅಮ್ಮನೊಂದಿಗೆ ಶಾಲೆಗೆ ಹೊರಡುತ್ತಿದ್ದೆ.. (ಹೌದು ನಾನು ಕಲಿತದ್ದು ನನ್ನ ತಾಯಿ ಟೀಚರ್ ಆಗಿದ್ದ ಶಾಲೆಯಲ್ಲಿಯೇ) ಹೋದಕೂಡಲೇ ಮುಖ್ಯೋಪಾಧ್ಯಾಯರು ಅಯಾ ತರಗತಿಗಳಿಗೆ ಅವರ ವಯಸ್ಸಿಗೆ ತಕ್ಕಂತೆ ಕೆಲಸಗಳನ್ನು ಹಂಚುತ್ತಿದ್ದರು. ಮುಖ್ಯವಾಗಿ ಕೆಲಸಗಳು ಸಿಗುತ್ತಿದ್ದುದು 5 ನೇ ಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ. ಅದರಲ್ಲಿ ಮುಖ್ಯವಾದುವೆಂದರೆ ಸಭಾಂಗಣದ ತಯ್ಯಾರಿ, ಬೆಂಚು ಡೆಸ್ಕುಗಳ ಜೋಡಣೆ, ಧ್ವಜಸ್ಥಂಬದ ತಯ್ಯಾರಿ ಇತ್ಯಾದಿ..


ಶಾಲಾ ಧ್ವಜ ಸ್ತಂ

ಎಲ್ಲಾತಯ್ಯಾರಿ ಆದನಂತರ ಧ್ವಜಾರೋಹಣ ಕಾರ್ಯಕ್ರಮ. ಊರಿನ ಗಣ್ಯ ವ್ಯಕ್ತಿ ಎಂದೆನಿಸಿಕೊಂಡವರಿಂದ ಇದನ್ನು ನಡೆಸಲಾಗುತ್ತಿತ್ತು. ಆಮೇಲೆ ಅವರು ನಮಗೆ ಶುಭಾಷಯಗಳನ್ನು ಹೇಳಿದನಂತರ ನಮ್ಮ ನಿಜವಾದ ಕಾರ್ಯಕ್ರಮ ಪ್ರಾರಂಭ ವಾಗುತ್ತಿತ್ತು ಅದುವೇ ಪ್ರಭಾತಫೇರಿ.. ಅಥವಾ march fast ಶಾಲೆಯಿಂದ ಹೊರಟ ಈ ನಮ್ಮ ಮೆರವಣಿಗೆ ಊರಿನ ಮುಖ್ಯ ಬೀದಿಯಿಂದ ಹಾದು ಸ್ವಲ್ಪ ದೂರದ ವರೆಗೂ ಹೋಗಿ ನಂತರ ಹಿಂತಿರುಗಿ ಬರುತ್ತಿದ್ದೆವು. ಹೀಗೆ ಹಾದುಹೋಗುವಾಗ ಅಂಗಡಿ ಮುಂಗಟ್ಟುಗಳನ್ನು ಹಾದು ಹೋಗಬೇಕಾದ್ದರಿಂದ ಎಲ್ಲಾ ಅಂಗಡಿಯವರು ನಮಗೆ ಚೊಕೊಲೇಟ್ ಗಳನ್ನು ಹಂಚುತ್ತಿದ್ದರು. ಹೀಗಾಗಿ ನಮಗೆ ಎನಿಲ್ಲವೆಂದರು 10 ಚೊಕೊಲೇಟ್ ಆವತ್ತು ಸಿಗುತ್ತಿದ್ದುದು ಗ್ಯಾರೆಂಟಿಯಾಗಿತ್ತು. ಹೀಗೆ ಮೆರವಣಿಗೆ ಹೋಗುವಾಗ "ಮಹಾತ್ಮಾ ಗಾಂಧೀಜೀ ಕೀ ಜೈ", "ಸುಭಾಶ್ ಚಂದ್ರ ಬೋಸ್ ಕೀ ಜೈ" ಎಂದು ಜೈಕಾರ ಹಾಕುವುದೂ ಒಂದು ಸಂಭ್ರಮ.

ಶಾಲೆಗೆ ಹಿಂತಿರುಗಿದ ನಂತರ ಸಭಾಕಾರ್ಯಕ್ರಮ ಪ್ರಾರಂಭವಾಗುತ್ತಿತ್ತು... ಆರಂಭದಲ್ಲಿ ಅಧ್ಯಾಪಕರು, ಮುಖ್ಯ ಅಥಿತಿಗಳ ಭಾಷಣಗಳು ಮುಗಿದ ನಂತರ ನಮ್ಮ ಅಂದರೆ "ವಿದ್ಯಾರ್ಥಿಗಳಿಂದ ಎರಡು ಮಾತುಗಳು" ಪ್ರಾರಂಭ. ನಡಗುವ ಕೈಕಾಲು, ಒಣಗಿದ ನಾಲಗೆ ಯಿಂದ ಹಾಗೋ ಹೀಗೋ ಸ್ಟೇಜ್ ಹತ್ತುತ್ತಿದ್ದೆ.. ಅಲ್ಲಿಯೋ ಎಲ್ಲರೂ ನನ್ನನ್ನೇ ಕೆಕ್ಕರಿಸಿ ನೋಡುವಂತೆ ಭಾಸವಾಗಬೇಕೆ... ಅಂತು ಅಲ್ಪ ಸ್ವಲ್ಪ ಧೈರ್ಯವನ್ನು ಒಗ್ಗೂಡಿಸಿ " ಸನ್ಮಾನ್ಯ ಸಭಾ ಅಧ್ಯಕ್ಷರೇ.... " ಪ್ರಾರಂಭಿಸುತ್ತಿದ್ದೆ.. ಒಂದೆರಡು ಪ್ಯಾರಾ ಮುಗಿಸಿ ಮುಖ್ಯ ವಿಷಯಕ್ಕೆ ಬರುತ್ತಿದ್ದಂತೆಯೇ ಹಾಳಾದ ಮರೆವು ಅದೇನು ತಯ್ಯಾರಿ ಮಾಡಿಕೊಂದು ಬಂದ್ದಿದ್ದೇವೆಂದು ಮರೆತು ಹೋಗಬೇಕೆ.. ಸ್ವಲ್ಪ ಹೊತ್ತು ತಡಕಾಡಿ ಜಪ್ಪಯ್ಯ್ಯಾ ಅಂದರೂ ನೆನಪಿಗೆ ಬರುವುದಿಲ್ಲ ಅಂದಮೇಲೆ ಕೊನೆಯ ಅಸ್ತ್ರ ಪ್ರಯೋಗಿಸುತ್ತಿದ್ದೆ.. ಅದೇ ಜೇಬಿನಲ್ಲಿರುವ ಭಾಷಣದ ಚೀಟಿ. ಅದನ್ನು ಮೆಲ್ಲಗೆ ಹೊರ ತೆಗೆದು ಯಾರಿಗೂ ಕಾಣಿಸದಂತೆ ಬಿಡಿಸಿ (??!!) ಮುಂದಿನ ಸಾಲುಗಳನ್ನು ಖಚಿತ ಪಡಿಸಿಕೊಂಡ ನಂತರ ಭಾಷಣವನ್ನು ಮುಂದುವರೆಸುತ್ತಿದ್ದೆ. ಬಹಳ ಕಷ್ಟಪಟ್ಟು ತಯ್ಯಾರಿಸಿದ ಈ ಭಾಷಣದಲ್ಲಿ ಕೊನೆಗೂ ಒಂದೆರಡು ಪ್ಯಾರಾಗಳು ಉಳಿದೇ ಹೋಗುತ್ತಿತ್ತು. ಕೊನೆಗೆ ಎಲ್ಲಾ ಮುಗಿದ ನಂತರ ಜೋರಾಗಿ "ಜೈ ಹಿಂದ್" ಎಂದರೆ ಈ ಭಾಷಣಕ್ಕೆ ಮುಕ್ತಾಯ... ಸ್ಟೇಜ್ ನಿಂದ ಕೆಳಗಿಳಿದ ಮೇಲೆ ಸ್ನೇಹಿತರು "ತುಂಬಾ ಚೆನ್ನಾಗಿತ್ತೋ ಮಾರಾಯಾ, ಬಹಳ ಚೆನ್ನಾಗಿ ಮಾತಾಡಿದಿ..." ಎಂದರೆ ಯುದ್ಧ ಗೆದ್ದು ಬಂದ ಸಂಭ್ರಮ.

ಶಾಲೆಯ ಸುತ್ತಲಿನ ಪರಿಸರ

ಸಾಮಾನ್ಯವಾಗಿ ಎಲ್ಲಾ ಮಕ್ಕಳಿಗೂ ಅವರ ಅಣ್ಣನೋ, ಅಕ್ಕನೋ ಭಾಷಣವನ್ನು ಬರೆದುಕೊಟ್ಟಿರುತ್ತಾರೆ ಅಲ್ಲದೇ ಅವರೂ ಇದೇ ಶಾಲೆಯ ಹಳೆ ವಿದ್ಯಾರ್ಥಿಗಳಾಗಿರುವುದರಿಂದ ಎಲ್ಲರ ಮಾತುಗಳು ಒಂದೇ ರೀತಿಯಾಗಿರುತ್ತವೆ. ಆದರೂ ದೇವರ ದಯೆಯಿಂದ ಎಲ್ಲರ ಭಾಷಣಗಳನ್ನು ತಾಳ್ಮೆಯಿಂದ ಕೇಳುತ್ತಿದ್ದೆವು (ಇಲ್ಲದಿದ್ದರೆ ಅಧ್ಯಾಪಕರ ಏಟು ತಿನ್ನಬೇಕು) ಎಲ್ಲ ಮಕ್ಕಳ ಭಾಷಣಗಳೂ ಮುಗಿದನಂತರ ಸಭಾಧ್ಯಕ್ಷರ ಮಾತುಗಳು..

ತದನಂತರ ರಾಷ್ಟ್ರ ಗೀತೆ ಹಾಡಿ ಮನೆಗೆ ಹೊರಟೆವೆಂದರೆ ಆ ವರ್ಷದ ರಾಷ್ಟ್ರೀಯ ದಿನಾಚರಣೆ ಮುಗಿದಂತೆ...

"ಇಷ್ಟು ಹೇಳಿ ನನ್ನ ಓಂದೆರಡು ಮಾತುಗಳನ್ನು ಮುಗಿಸುತ್ತಿದ್ದೇನೆ......."


No comments:

Post a Comment