ಮಂಗಳವಾರ, ಜನವರಿ 12, 2010

ಕನಸು

ಮುಂಜಾವಿನ ಹೊತ್ತದು
ಸೂರ್ಯ ಇನ್ನೂ ಮೂಡಿರಲಿಲ್ಲ
ಇಬ್ಬನಿಯ ತಂಪು ಗಾಳಿ ಬೀಸುತ್ತಿತ್ತು
ದೂರದಲ್ಲೊಂದು ಹಕ್ಕಿ ಕೂಗಿದ ಸದ್ದು

ಚಳಿಯೆಂದು ಇನ್ನೂ ಬೆಚ್ಚನೆ ಮಲಗಿದ್ದೆ
ಗುಬ್ಬಿಯಂತೆ ನನ್ನ ಪುಟ್ಟ ಮನೆಯಲ್ಲಿ
ಆಗ ಮೂಡಿತು ಒಂದು ಸುಂದರ ಕನಸು
ಗಂಧರ್ವ ಲೋಕಕ್ಕೆ ದಾರಿ ಕಂಡಂತೆ

ನಾನು ಹಾರಿ ಹೋಗುತ್ತಿದ್ದೆ ಮೋಡಗಳಾಚೆ
ಒಮ್ಮೆ ಮೇಲಕ್ಕೆ, ಬಲಕ್ಕೆ, ಎಡಕ್ಕೆ ಮತ್ತೆ ಜೀಕಿ ಕೆಳಕ್ಕೆ
ಹಿಡಿಯುವವರಿರಲಿಲ್ಲ ನನ್ನನ್ನ್ನು ಯಾರೂ
ಹಂಸ ರಾಜನೇ ನಾನೆಂಬಂತೆ ಹಾರುತ್ತಿದ್ದೆ

ಆಗ ಅಲ್ಲೊಂದು ಕಂಡಿತು ಸ್ವರ್ಣ ದ್ವಾರ
ಲೋಕದ ಸಕಲ ಸೌಂದರ್ಯವೂ
ಈ ಬಾಗಿಲ ಹಿಂದೆ ಮರೆಯಾದಂತೆ ಕಾಣುತ್ತಿತ್ತು
ಮೆಲ್ಲನೆ ಬಾಗಿಲ ಸರಿಸಿ ನೋಡಿದೆ

ಸುಂದರ ಲೋಕವೊಂದು ಅಲ್ಲಿ ಸೆರೆಯಾಗಿತ್ತು
ಸುವಾಸಿತ ಫಲ ಪುಷ್ಪಗಳಿಂದ ಸಜ್ಜುಗೊಂಡಿತ್ತು
ಅದೇನೋ ಅವರ್ಣನೀಯ ಆನಂದ ಎಲ್ಲೆಡೆ ಪಸರಿಸಿದಂತೆ
ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಿದ್ದವು


ಆಗ ನನಗೊಂದು ಸುಂದರ ದೃಶ್ಯ ಕಂಡಿತು
ಒಂದು ಮಗು ನನ್ನನ್ನು ಕೈ ಬೀಸಿ ಕರೆಯುತ್ತಿತ್ತು
ನನ್ನನ್ನೇ ಬಹಳ ಸಮಯದಿಂದ ಕಾದು ಕುಳಿತಂತೆ
ನಾನೂ ಕೂಡಾ ಕೈ ಚಾಚಿ ಮುನ್ನಡೆದೆ

ಇನ್ನೇನು ಮಗುವನ್ನು ಸ್ಪರ್ಶಿಸುವಷ್ಟರಲ್ಲಿ
ಕಾರ್ಗತ್ತಲು ಮೂಡಿತು, ಗಾಳಿ ಬೀಸಿತು
ನಾನು ಭಯದಿಂದ ನಡಗುತ್ತಿದ್ದೆ, "ಇದೇನಾಗಿ ಹೋಯಿತು?"
ಅಷ್ಟರಲ್ಲಿ ಎಚ್ಚರವಾಗಿ ಅರಿವಾಯಿತು, ಒಹ್ ಇದು ಬರಿ "ಕನಸು"



2 ಕಾಮೆಂಟ್‌ಗಳು: