ಶುಕ್ರವಾರ, ಡಿಸೆಂಬರ್ 18, 2009

ನಾನು ಮೆಚ್ಚಿದ ಪುಸ್ತಕ...


ಕೆ.ಪಿ.ಪೂರ್ಣಚಂದ್ರ ತೇಜಸ್ವಿ

"ಅದ್ಭುತ" ಎಂಬ ಒಂದೇ ಶಬ್ದ ಸರಿಸಾಟಿಯಾಗುತ್ತದೆ ಈ ಪುಸ್ತಕಕ್ಕೆ.... ನಾನು ಇಲ್ಲಿ ಹೇಳ ಹೊರಟಿರುವುದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ "ಕರ್ವಾಲೋ" ಪುಸ್ತಕದ ಬಗ್ಗೆ. ಈ ಪುಸ್ತಕದಲ್ಲಿ ಬರುವ ಒಂದೊಂದು ಪಾತ್ರಗಳೂ ಬರೀ ಪಾತ್ರಗಳಾಗಿರದೇ ಜೀವಂತ ವ್ಯಕ್ತಿಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ. ಸ್ವತಃ ತೇಜಸ್ವಿಯರೇ ಒಂದು ಪಾತ್ರವಾಗಿರುವ ಈ ಪುಸ್ತಕದಲ್ಲಿ; ಒಂದುತ್ತಾ ಹೋಗುತ್ತಿದ್ದಂತೆಯೇ ನಾವು ಕೂಡಾ "ಕರ್ವಾಲೋ" ಲೋಕದ ಒಂದು ಜೀವಂತ ಪಾತ್ರವಾಗಿಬಿಡುವುದರಲ್ಲಿ ಸಂಶಯವಿಲ್ಲ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಜೇನು ತರಲು "ಮೂಡಿಗೆರೆ ಜೇನು ಸೊಸೈಟಿ"ಗೆ ಹೋಗುವುದರಿಂದ ಪ್ರಾರಂಭವಾಗುತ್ತದೆ ಈ ಪುಸ್ತಕ. ಅಲ್ಲಿನ ಬೀ ಮ್ಯಾನ್ ಲಕ್ಷ್ಮಣ ಮತ್ತು ಅವನ ಸಹಾಯಕನ ಸಿನಿಮಾ ಲೋಕದ ಕಲ್ಪನೆಗಳು ನಿಜಕ್ಕೂ ಸುಂದರವಾಗಿ ಚಿತ್ರಿಸಲಾಗಿದೆ. ತನ್ನ ಭತ್ತದ ಗದ್ದೆಗೆ ಹುಳುವಿನ ಕಾಟ ಪ್ರಾರಂಭವಾಗಿದ್ದರಿಂದ ಅದರ ನಿವಾರಣೆಗೆ ತೇಜಸ್ವಿಯವರು ಪ್ರೊಫ಼ೆಸರ್ ಕರ್ವಾಲೋ ಅವರನ್ನು ಭೇಟಿಯಾಗಲು ಹೋಗುತ್ತಾರೆ. ತೇಜಸ್ವಿ ಮತ್ತು ಕರ್ವಾಲೋ ಅವರ ಭೇಟಿ ಒಂದು ಅಜ್ನಾತ ಲೋಕದ ಪ್ರಯಾಣಕ್ಕೆ ನಾಂದಿ ಮಾಡಿಕೊಡುತ್ತದೆ. ಪ್ರೊII ಕರ್ವಾಲೋ ಬಳಿ ಸಹಾಯಕನಾಗಿ ಕೆಲಸ ಮಾಡುವ ಮಂದಣ್ಣ ಲೇಖಕರ ಮನೆಯಾಳು ಕೂಡಾ ಹೌದು. ಕರ್ವಾಲೋ ಅವರಿಗೆ ಮಂದಣ್ಣ ಒಬ್ಬ ಸೃಷ್ಟಿಯ ಹಲವಾರು ರಹಸ್ಯಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂದಿರುವ ಒಬ್ಬ ವ್ಯಕ್ತಿಯಾದರೆ ಲೇಖಕರಿಗೆ ಅವನೊಬ್ಬ ಸಾಮಾನ್ಯ ಕೆಲಸದ ಆಳು. ಊರಿನವರಿಗೋ ಈ ಮಂದಣ್ಣನೆಂದರೆ ಯಾವ ಕೆಲಸಕ್ಕೂಬಾರದ ಹಳ್ಳೀ ಗಮಾರ. ಈ ರೀತಿಯಾಗಿ ಒಬ್ಬ ವ್ಯಕ್ತಿಯ ಹಲವಾರು ಮುಖಗಳ ಪರಿಚಯವೇ ಈ ಮಂದಣ್ಣ.

ತೇಜಸ್ವಿ ಮತ್ತು ಕರ್ವಾಲೋ ಅವರ ಮುಂದುವರಿದ ಈ ಸ್ನೇಹ ಸೃಷ್ಟಿಯ ಹಲವಾರು ವಿಸ್ಮಯಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಹಿಮಯುಗಗಳು, ವಿಕಾಸವಾದ ಇತ್ಯಾದಿ ವಿಷಯಗಳ ಮೇಲಿನ ಚರ್ಚೆ ಒಂದು ವಿಸ್ಮಯ ಲೋಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಅಲ್ಲದೇ ಊರಿನಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜೇನು ಹುಳಗಳ ಧಾಳಿಯಾದಾಗ; ಅದು ಬ್ಯಾಂಡ್ ಡ್ರಂ ನಿಂದ ಹೊರಟ ಧ್ವನಿ ತರಂಗಗಳಿಂದ ಜೇನು ಕೆರಳಿ ಧಾಳಿ ಮಾಡಿದೆ ಎಂಬುದಾಗಿ ಕರ್ವಾಲೋ ಅವರು ವಿವರಿಸುತ್ತಾರೆ. ಇದು ಕೀಟ ಜಗತ್ತಿನ ವಿಸ್ಮಯವನ್ನು ಕೂಡಾ ನಮ್ಮ ಮುಂದೆ ಸಾದರ ಪಡಿಸುತ್ತದೆ.

ಮುಂದೆ ಬರುವುದು ಮಂದಣ್ಣನ ಮದುವೆ ದೃಶ್ಯ. ಇದು ಮಾತ್ರ ನೀವು ಓದಿಯೇ ಆನಂದಿಸಬೇಕು. ನಕ್ಕು ಸುಸ್ತಾಗಿಸುವ ಒಂದೊಂದು ಘಟನೆಗಳೂ ತೇಜಸ್ವಿ ಅವರ ಹಾಸ್ಯ ಪ್ರಜ್ನೆಗೆ ಉದಾಹರಣೆಯಾಗಿದೆ.

ನಂತರ ಪ್ರಾರಂಭವಾಗುತ್ತದೆ ಕರ್ವಾಲೋ ಜಗತ್ತಿನ ವಿಸ್ಮಯ ಲೋಕಕ್ಕೆ ಪ್ರಯಾಣ. ಒಂದು “ಹಾರುವ ಓತಿ” ಯ ಹುಡುಕಾಟದಲ್ಲಿ ಪ್ರೊII ಕರ್ವಾಲೋ, ತೇಜಸ್ವಿ, ಮಂದಣ್ಣ ಮತ್ತು ಕಿವಿ ಹೊರಡುತ್ತಾರೆ. ಈ ಕಿವಿ ಯಾರು ಎಂದು ಕೇಳುತ್ತಿದ್ದೀರಾ? ಇದು ಒಂದು ಬರಿ ನಾಯಿ ಎಂದರೆ ತಪ್ಪಾಗುತ್ತದೆ ಏಕೆಂದರೆ ಇದು ಬರಿ ನಾಯಿಯಲ್ಲ; ಒಂದು ಬುದ್ಧಿವಂತ ಪ್ರಾಣಿ ಎನ್ನಬಹುದು.

ಎತ್ತಿನ ಗಾಡಿಯಲ್ಲಿ ಸಾಗುವ ಇವರ ಪ್ರಯಾಣದೊಂದಿಗೆ ನಾವೂಕೂಡಾ ಒಬ್ಬ ಪ್ರಯಾಣಿಕರಾಗುವುದರಲ್ಲಿ ಸಂಶಯವಿಲ್ಲ. ಈಚಲು ಬಯಲಿನ ನಡುವೆ ಸಾಗುವ ಇವರ ಪ್ರಯಾಣ ದಟ್ಟ ಕಾನನದಂಚಿನ ವರೆಗೂ ಕುತೂಹಲಗಳ ಗೂಡಾಗಿದೆ. ಸೂರ್ಯ ರಶ್ಮಿಯೂ ಬೀಳದ ದಟ್ಟ ಕಾಡಿನೊಳಗೆ ಒಂದು ಹಾರುವ ಹಲ್ಲಿಯನ್ನು ಹುಡುಕುವುದೆಂದರೆ ಹುಲ್ಲಿನ ಮೂಟೆಯಲ್ಲಿ ಗುಂಡು ಸೂಜಿಯನ್ನು ಹುಡುಕಿದಂತೆಯೇ ಸರಿ.

ಕಾಡಿನೊಳಗೆ ಪ್ರವೇಶಿಸಿದಂತೆಯೇ ಕಾಡುವ ನೀರವ ಮೌನ ಯಾಂತ್ರಿಕ ಬದುಕಿನಿಂದ ದೂರಕ್ಕೆ ಕೊಂಡೊಯ್ಯುವಂತೆ ಭಾಸವಾಗುವ ದೃಶ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ. ಈ ರೀತಿ ಹಲವಾರು ಪ್ರಯತ್ನದೊಂದಿಗೆ, ಹುಡುಕಾಟದ ನಂತರ ಕೊನೆಗೂ ಪ್ರತ್ಯಕ್ಷವಾಗುತ್ತದೆ “ಹಾರುವ ಹಲ್ಲಿ” ಅದೇನು ಕೈಗೆಟಕುವಷ್ಟು ದೂರದಲ್ಲಿದೆಯೇ? ಅದೂ ಇಲ್ಲ... ಮರದ ತುದಿಯಲ್ಲಿ ಕುಳಿತಿರುವ ಹಲ್ಲಿಯ ಬಗ್ಗೆ ತೇಜಸ್ವಿಯವರು ಕರ್ವಾಲೋ ಅವರಿಗೆ ವಿವರಿಸುತ್ತಾ ಹೋಗುತ್ತಿದಂತೆಯೇ ನಮ್ಮ ಮುಂದೊಂದು ಚಿತ್ರ ಮೂಡುತ್ತದೆ. ಹಲ್ಲಿಯನ್ನು ಹಿಡಿಯಲು ಶತ ಪ್ರಯತ್ನ ಮಾಡುವ ತೇಜಸ್ವಿ ತಂಡ ಇನ್ನೇನು ಅದನ್ನು ಹಿಡಿದರು ಎನ್ನುತ್ತಿದ್ದಂತೆಯೇ ಹಲ್ಲಿ ಹಾರಿ ದೂರದ ಕಾಡಿನಲ್ಲಿ ಮರೆಯಾಗುತ್ತದೆ.

ಆದರೆ ಒಂದು ಯಕೃಶ್ಚಿತ್ ಹಲ್ಲಿಯನ್ನು ಹಿಡಿಯಲು ಇಷ್ಟೆಲ್ಲಾ ಯಾಕೆ ಕಷ್ಟ ಪಡುತ್ತಾರೆಂದುಕೊಂಡಿರಾ? ಕಾರಣ ಇಷ್ಟೆ; ಈ ಹಾರುವ ಹಲ್ಲಿ ಕೋಟ್ಯಾಂತರ ವರ್ಷಗಳಿಂದ ಯಾವ ಮಾರ್ಪಾಡು, ವಿಕಾಸವಾದಕ್ಕೆ ಒಳಗಾಗದೆ ತನ್ನ ಮೂಲ ರೂಪವನ್ನುಳಿಸಿಕೊಂಡಿರುವ ಒಂದು ಅದ್ಭುತ ಜೀವಿ. ಹಾಗಾಗಿ ಈ ಪ್ರಯಾಣ ಸೃಷ್ಟಿಯ ವಿಕಾಸವಾದ, ಬದಲಾವಣೆ ಇತ್ಯಾದಿಗಳ ಬಗ್ಗೆ ಒಂದು ಬೃಹತ್ ಪ್ರಶ್ನೆಯನ್ನು ನಮ್ಮ ಮುಂದಿರಿಸುತ್ತದೆ.

ತೇಜಸ್ವಿಯವರ ಈ ಪುಸ್ತಕ ನಿಮ್ಮ ಮನಸ್ಸನ್ನು ಸೃಷ್ಟಿಯ ಇನ್ನೊಂದು ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ......


















4 ಕಾಮೆಂಟ್‌ಗಳು: