Thursday, December 17, 2009

ನನ್ನ ಅಜ್ಜಿ ಮನೆ ನೆನಪುಗಳು...


ನನ್ನ ಅಜ್ಜಿ ಮನೆ "ಹಾಳುವಂಟೊ"

ಏನಪ್ಪಾ.. 5ನೇ ಕ್ಲಾಸಿನ ಮಕ್ಕಳಿಗೆ ಕೊಡುವ ಪ್ರಬಂಧದಂತಿತೆ ತಲೆ ಬರಹ ಅಂದುಕೊಂಡಿರಾ....? ಹಾಗೆನಿಲ್ಲಾ, ನನ್ನ ಬಾಲ್ಯದ ಮಧುರ ನೆನಪುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ....
ನನ್ನ ಅಜ್ಜಿಮನೆ ಇರುವುದು ಧರ್ಮಸ್ಥಳದಿಂದ 20Km ದೂರದಲ್ಲಿ ಶಿಶಿಲ ಎಂಬ ಊರಿನಲ್ಲಿ... ದರ್ಭೆತಡ್ಕ ಕಾಲಕಾಮ ಪರಶುರಾಮ ದೇವಸ್ಥಾನದಿಂದ 1 Km ದೂರದಲ್ಲಿದೆ ನನ್ನ ಅಜ್ಜಿ ಮನೆ..
ಶಾಲೆಯ ವಾರ್ಷಿಕ ರಜೆ ಸಿಕ್ಕಿದ ಕೂಡಲೇ ಮೊದಲು ಓಡುತ್ತಿದ್ದುದು ಅಲ್ಲಿಗೇ.. (ಎಲ್ಲಾ ಮಕ್ಕಳೂ ಅದೇ ಮಾಡುವುದು ಬಿಡಿ, ಆದರೆ ಇಂದಿನ ಮಕ್ಕಳು summer camp ಗಳಿಗೆ ಹೋಗುತ್ತಾರೆ). ಹಾಗಾಗಿ ನಮಗೆಲ್ಲಾ ಅದೇ summer camp ಆಗಿತ್ತು... ನಾವು ಒಟ್ಟು 16 ಜನ ಮೊಮ್ಮಕ್ಕಳು; ಅದರಲ್ಲಿ 10 ಜನ ಸೇರಿದರೂ ಮಜಾ ಮಾಡಲು ಏನೂ ತೊಂದರೆ ಇರುತ್ತಿರಲಿಲ್ಲ...
ಸುತ್ತ ಹಸಿರು ತೋಟ, ಪಕ್ಕದಲ್ಲೇ ಹರಿಯುವ ನದಿ, ತಿರುಗಾಡಲು ಗುಡ್ಡ ಬೆಟ್ಟ, ನಡುವೆ ಅಜ್ಜಿ ಪ್ರೀತಿಯಿಂದ ಕೊಡುತ್ತಿದ್ದ ತಿಂಡಿಗಳು. ಕಥೆಗಳಲ್ಲಿ ಬರುವ ಕಿನ್ನರ ಲೋಕ ಎಂದರೆ ಅದೇ ಇರಬೇಕು.
ನಮ್ಮ ದಿನಚರಿ ಪ್ರಾರಂಭ ವಾಗುತ್ತಿದ್ದುದು ಬೆಳಗ್ಗಿನ ಸೂರ್ಯ ರಶ್ಮಿ ನಮ್ಮ ಬೆನ್ನ ಮೇಲೆ ಬಿದ್ದ ಮೇಲೆಯೆ. ಭೆಳಗ್ಗೆ ಎದ್ದು ಮುಖ ತೊಳೆದ ಕೂಡಲೆ ಸಿಗುತ್ತಿತು ಬಿಸಿ ಬಿಸಿ ಕಾಪಿ... 5-6 ಜನ ಮಕ್ಕಳು ಸೇರಿ ಅಡುಗೆ ಮನೆಯಲ್ಲಿ ದಾಂಧಲೆ ಎಬ್ಬಿಸುತ್ತಿದ್ದರೆ ಅಜ್ಜಿಗೋ ನಮ್ಮನ್ನು ಸುಮ್ಮನಿರಿಸುವುದೇ ಕೆಲಸ. ಇದಾದ ಕೂಡಲೇ ಅಂಗಳದಲ್ಲಿ ಬೆಳಗ್ಗಿನ ಕ್ರಿಕೆಟ್ ಪ್ರಾರಂಭ. ಚೆಂಡು ಮನೆಯೊಳಗೆ ಬಂದ ಕೂಡಲೇ ಮಾವ ನಮ್ಮನ್ನು ಬೈದು ಹೂವು ಕೊಯ್ಯಲು, ಗೇರು ಬೀಜ ಕೊಯ್ಯಲು ಅಟ್ಟುತ್ತಿದ್ದರು; ಸರಿ ನಮ್ಮ ಮಕ್ಕಳ ಸೈನ್ಯ ಯಾವ ಕೆಲಸಕ್ಕೂ ರೆಡಿ ಇರುತ್ತಿತ್ತು.. (ಇದರ ಹಿಂದೆ ಒಂದು ಕಾರಣ ಇದೆ) ಗುಡ್ಡೆಗೆ ಹೋಗಿ ಗೇರು ಬೀಜ ಹೆಕ್ಕಿ ಮನೆಗೆ ಬರುತ್ತಿದ್ದಂತೆಯೇ ತಿಂಡಿ ತಯ್ಯಾರಿರುತ್ತಿತ್ತು....

ಅಜ್ಜಿ ಮನೆಯ ಸಾಂಪ್ರದಾಯಿಕ ಅಡುಗೆ ಮನೆ

ಸರಿ ಮತ್ತೆ ಅಡುಗೆ ಮನೆಯಲ್ಲಿ ದಾಂಧಲೆಯೊಂದಿಗೆ ಉಪಾಹಾರ ಕರ್ಯಕ್ರಮ ಮುಗಿದ ಕೂಡಲೇ ನಮ್ಮ ದಿನದ ಕಾರ್ಯಕ್ರಮಗಳ ಪಟ್ಟಿ ತಯಾರಾಗುತ್ತಿತ್ತು. ಇವತ್ತು ಯಾವ ಆಟ ಆಡಬೇಕು, ಯಾವ ಕಡೆ ತಿರುಗಾಟ ಇತ್ಯಾದಿ..
10 ಘಂಟೆಯಾದ ಕೂಡಲೇ ನದಿಗೆ ಈಜಲು ಹೋಗಲು ಮನಸ್ಸು ಕಾತರಿಸುತ್ತಿತ್ತು; ಆದರೆ ಇದಕ್ಕೆ ಮಾವನ ಅನುಮತಿ ಅತ್ಯಗತ್ಯವಾದ್ದರಿಂದ ಅನುಮತಿ ಕೇಳಲು ನಮ್ಮಲ್ಲೊಬ್ಬರನ್ನು ಆಸೆ ತೋರಿಸಿ, ಹುರಿದುಂಬಿಸಿ ಕಳುಹಿಸಿ, ಅನುಮತಿ ಸಿಕ್ಕಿತೋ... ನದಿಯ ಕಡೆಗೆ ಒಂದೇ ಓಟ... (ಬೆಳಗ್ಗೆ ಮಾವ ಹೇಳುತ್ತಿದ್ದ ಎಲ್ಲಾ ಕೆಲಸಗಳನ್ನೂ ಚಾಚೂ ತಪ್ಪದೇ ಮಾಡುತ್ತಿದ್ದುದು ಇದೇ ಕಾರಣಕ್ಕಾಗಿ...)

ನಾವು ಈಜಾಡಲು ಹೋಗುತ್ತಿದ್ದ ನದಿ

ಇದರಲ್ಲಿ ಎರಡು ಪಂಗಡಗಳು, ಈಜು ಬರುವವರು ಮತ್ತು ಈಜು ಬಾರದವರು (ನಾನು ಈಜು ಬರದವರ ಪಂಗಡಕ್ಕೆ ಸೇರಿದವನಾಗಿದ್ದೆ). ಈಜು ಬರುವವರು ಆಳಕ್ಕಿಳಿದರೆ ನಾವು ಸೊಂಟದವರೆಗಿನ ನೀರಿನಲ್ಲಿಯೇ ಖುಶಿ ಪಡುತ್ತಿದ್ದೆವು. ಅಲ್ಲದರೂ ಸುಮ್ಮನೆ ಆಡುತ್ತಿದ್ದೆವೋ? ಅದೂ ಇಲ್ಲ... ದೊಡ್ಡ ಮಕ್ಕಳು ಏನಾದರೂ ಕೀಟಲೆ ಮಾಡಿ ಸಣ್ಣ ಮಕ್ಕಳನ್ನು ಅಳಿಸುವುದೇ ಕೆಲಸ.. ಈ ಮಧ್ಯ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ಮಧ್ಯಾನ್ಹ ಮಾವ ಬಂದು ಕರೆದ ಮೇಲೆಯೇ ನಾವು ನೀರಿನಿಂದ ಅಚೆ ಬರುತ್ತಿದ್ದುದು.

ಈ ತೋಟವೇ ನಮ್ಮ ಕ್ರಿಕೆಟ್ ಮೈದಾನ

ಮಧ್ಯಾನ್ಹದ ಊಟದ ನಂತರ ಮತ್ತೆ ಕ್ರಿಕೆಟ್ (ಈ ಬಾರಿ ತೋಟದಲ್ಲಿ ಯಾಕೆಂದರೆ ಅಂಗಳದಲ್ಲಿ ಅಡಿದರೆ ಮಲಗಿರುವವರಿಗೆ ತೊಂದರೆ). ಎಷ್ಟು ಹೊಡೆದರೂ ಅಡಕೆ ಮರಕ್ಕೆ ತಾಗುತ್ತಿದ್ದ ಚೆಂಡಿನ ಜೊತೆಗೆ ಸಾಗುತ್ತಿತ್ತು ನಮ್ಮ ಆಟ. ಸಂಜೆ ಮತ್ತೆ ಕಾಪಿ, ಸಾಯಂಕಾಲ ಮನೆ ಒಳಗೇ ಆಡಬೇಕೆಂಬ ಕಟ್ಟಪ್ಪಣೆಯೊಂದಿಗೆ ನಡೆಯುತ್ತಿತ್ತು ನಮ್ಮ ಗೌಜಿ ಗದ್ದಲ. ರಾತ್ರಿ ಊಟದ ನಂತರ ಅಜ್ಜಿಯ ಕಥೆ ಕೇಳುತ್ತಾ ಮಲಗಿದರೆ ನಿದ್ದೆ ಬಂದದ್ದೇ ತಿಳಿಯುತ್ತಿರಲಿಲ್ಲ......
ಇದೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ; ಇವತ್ತಿನ ಮಕ್ಕಳಿಗೆ ಆ ಖುಶಿ, ಸಂತೋಷ ಖಂಡಿತಾ ಸಿಗಲು ಸಾಧ್ಯವಿಲ್ಲ. ಬರಿ ಹಣ ಕೀಳುವ summer camp ಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪ್ರಕೃತಿಯ ಅನಾವರಣ ಹೇಗೆ ಸಾಧ್ಯ? ಅಲ್ಲದೇ tution , music class, dance class ಗಳ ನಡುವೆ ಇಂದಿನ ಮಕ್ಕಳು ಕೌಟುಂಬಿಕ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಯಾತ್ರಿಕ ಬದುಕು ನಾಳಿನ ಪೀಳಿಗೆಯನ್ನು ಬರೀ ಹಣ ಗಳಿಸುವ ಯಂತ್ರವಾಗಿಸುತ್ತಿದೆ ಅಲ್ಲವೇ?

No comments:

Post a Comment