ಶನಿವಾರ, ಆಗಸ್ಟ್ 14, 2010

ಬೆಳಕು


ಹೊಸ ಜೀವದಲಿ ಹೊಸ ಭಾವದಲಿ

ಭರವಸೆಯ ಬೆಳಕೊಂದು, ಮೂಡಿ ಮಿಂಚಿಹುದು

ಕರುಣ ದೀಪವಿದು, ಅಶಾ ಭಾವವಿದು

ಮನದ ಮೂಲೆಯಲಿ ಹೊಸ ಆಸೆ ತಂದಿಹುದು


ಕಳೆದ ಕಹಿ ದಿನಗಳ ನೆನಪು

ಮತ್ತೆ ನೆನೆವುದೇಕಿಂದು,

ಚಿಂತಿಸಿ ದೇಹವನೆ ಚಿತೆಯಾಗಿಸಬೇಕೆ

ಮರೆತು ಬಿಡು ಅದನ


ತಂಗಾಳಿ ಬೀಸಿಹುದು, ಪರಿಮಳವ ತಂದಿಹುದು

ಹರಿವ ಝರಿತೊರೆಗಳ ಸದ್ದು, ಮನವ ತುಂಬಿಹುದು

ಒಹ್, ಶಬ್ದ ಕೋಶವೇ ಸಾಲದಾಗಿದೆ ನನಗೆ

ನನ್ನ ಮನದ ಸಂತಸವ ನಿಮಗೆ ಬಣ್ಣಿಸಲು


ಸಹಸ್ರ ಹಣತೆಯ ಬೆಳಕು ಮೂಡಿಹುದು ಮನದೊಳಗೆ

ಹೊಸ ಹುರುಪು, ಹೊಸ ಆಸೆ ತಂದಿಹುದು ಜೊತೆ ಜೊತೆಗೆ

ಭರವಸೆಯ ಭಾವದಲಿ ಬದುಕು ಆತ್ಮನೆ ನೀನು

ಬದುಕಿನ ಚಿಂತನೆಯಲಿ ದೇಹ ಮನವೆರಡು ಸಾಗಿಹುದು ಜೊತೆ ಜೊತೆಗೆ.

ಬುಧವಾರ, ಆಗಸ್ಟ್ 11, 2010

ಶಿಲ್ಪ ಕಾವ್ಯ


ಬರಿಯ ಶಿಲ್ಪವಲ್ಲವಿದು

ಬರಿಯ ಕಲ್ಲ ಹೂವಲ್ಲವಿದು

ಇದೊಂದು ಕಾವ್ಯ

ಶಿಲ್ಪಿಯ ಚಾಣದಲ್ಲರಳಿದ ಕವನ


ಎಲ್ಲಿಯೋ ಬಿದ್ದಿದ್ದ ಕಲ್ಲೊಂದು

ಗಾಳಿ, ಮಳೆಯಡಿಯಿದ್ದ ಬಂಡೆಯೊಂದು

ಸುಂದರ ಶಿಲ್ಪವಾದ ಬಗೆಯಿದು

ಭಗವಂತನ ಸ್ವರೂಪವಾದ ಕಥೆಯಿದು


ಕಾವ್ಯದ ಪದಗಳ ಸುಳಿಯಲ್ಲಿ

ಶಿಲ್ಪದ ಕೆತ್ತನೆಯ ತಿರುವಿನಲ್ಲಿ

ರವಿ ಕಾಣದ್ದು ಕವಿ ಕಂಡರೆ

ಜಗ ಕಾಣದ್ದು ಶಿಲ್ಪಿ ಕಂಡ


ಕವಿಯ ಕಾವ್ಯದ ಅಮೊಘ ಕಲ್ಪನೆ

ಶಿಲ್ಪಿಯ ಶಿಲ್ಪದ ಸುಂದರ ಕೆತ್ತನೆ

ಆನಂದ ನಾಟ್ಯವಿದು

ಶಿಲ್ಪ ಕಾವ್ಯದ ಸುಂದರ ಸಮ್ಮಿಳಿತವಿದು