ಮಂಗಳವಾರ, ಮೇ 4, 2010

ಶಾಂತಿ...

ತಿಳಿದಿಲ್ಲ ನನಗಿಂದು
ಮನಸ್ಸು ಚಡಪಡಿಸಿಹುದು
ತಿಳಿ ನೀರಿಗೆ ಕಲ್ಲೆಸೆದಂತೆ
ಅಬ್ಬರದ ಅಲೆಗಳು ಉಕ್ಕೇರಿದಂತೆ

ಹಳೆ ದಿನಗಳು ಮತ್ತೆ ನೆನಪಾಗುವುದು
ಕತ್ತಲೆಯ ಕೋಣೆಯಲಿ ಕೂಡಿಹಾಕಿದಂತೆ
ಕಾರಣವು ತಿಳಿದಿಲ್ಲ, ಹಾದಿ ತೋಚುತ್ತಿಲ್ಲ
ಕಾರ್ಮೋಡ ಆವರಿಸಿಹುದು ಎಲ್ಲೆಲ್ಲೂ ಬೆಳಕಿಲ್ಲದಂತೆ

ಹೊರಗೆ ತಂಗಾಳಿ ಬೀಸುತ್ತಿತ್ತು
ಆದರೆ ಮನದೊಳಗೆ ಸಿಡಿಲು ಗುಡುಗಿನಬ್ಬರ
ಗಜವೊಂದು ಚೆಂದೋಟವ ಹಾಳ್ಕೆಡವಿಂತೆ
ದಿಕ್ಕು ತೋಚದ ಮೃಗವು ಕಂಗೆಟ್ಟು ಕೂಗಿದಂತೆ

ಮನವು ಬಯಸಿದೆ ಆತ್ಮ ಶಾಂತಿಯನಿಂದು
ನಿತ್ಯ ನೂತನ ಸತ್ಯ ಎಲ್ಲಿಹುದೆಂದು
ಬೋಧೀ ವೃಕ್ಷದ ಕೆಳಗೆ ಸಿಗುವುದೋ, ಅಲ್ಲ
ಹಿಮಾಲಯದ ತಪ್ಪಲಿನಲ್ಲಿ ದೊರಕುವುದೋ ತಿಳಿದಿಲ್ಲ

ಆಗೊಂದು ತರಂಗವು ನನ್ನ ಮನಸ್ಸನ್ನು ತಟ್ಟಿತು
ಓಂಕಾರ ನಾದದ ನಿನಾದ ಆತ್ಮವನ್ನು ಮುಟ್ಟಿತು
ಮನಸ್ಸು ತಿಳಿಯಾಯಿತಾಗ, ಶುದ್ಧ ಸ್ಫಟಿಕದಂತೆ
ಆತ್ಮ ಶಾಂತಿಯು ದೊರಕಿತು ಬುದ್ಧ ವಿವೇಕರಂತೆ